ಜಿಲ್ಲೆ

ಕರೊನಾ ಸೇನಾನಿಗಳ ಸಂಬಳಕ್ಕೆ ಕತ್ತರಿ!

ಕೇಶವಮೂರ್ತಿ ವಿ.ಬಿ., ಹುಬ್ಬಳ್ಳಿ

ಲಾಕ್​ಡೌನ್ ಸಂದರ್ಭದಲ್ಲಿ ಸಿಬ್ಬಂದಿಯ ವೇತನ ಕಡಿತ ಮಾಡಬಾರದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಿದ್ದರೂ, ಕರೊನಾ ವಿರುದ್ಧ ಹೋರಾಡುತ್ತಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ‘104 ಆರೋಗ್ಯ ಸಹಾಯವಾಣಿ’ಯ 70ಕ್ಕೂ ಹೆಚ್ಚು ಸಿಬ್ಬಂದಿಯ ಸಂಬಳಕ್ಕೆ ಕತ್ತರಿ ಹಾಕಿರುವ ಅಂಶ ಬೆಳಕಿಗೆ ಬಂದಿದೆ.

ಆರೋಗ್ಯ ಇಲಾಖೆಯ ಅಧೀನದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಎರಡು ಕಡೆ 104 ಆರೋಗ್ಯವಾಣಿ ಕೇಂದ್ರ ಕಚೇರಿಗಳಿವೆ. ಹೈದರಾಬಾದ್ ಮೂಲದ ಪಿರಾಮಲ್ ಸ್ವಾಸ್ಥ್ಯ ಎಂಬ ಖಾಸಗಿ ಸಂಸ್ಥೆ ಇದರ ಹೊಣೆಗಾರಿಕೆ ಹೊತ್ತಿದೆ. ಹುಬ್ಬಳ್ಳಿಯಲ್ಲಿ 360 ಹಾಗೂ ಬೆಂಗಳೂರಿನಲ್ಲಿ 150 ನೌಕರರಿದ್ದಾರೆ.

ಹುಬ್ಬಳ್ಳಿ ಶಾಖೆಯ 70ಕ್ಕೂ ಹೆಚ್ಚು ನೌಕರರು ಲಾಕ್​ಡೌನ್ ಆರಂಭದಲ್ಲಿ ತಮ್ಮ ಊರಲ್ಲಿ ಸಿಲುಕಿಕೊಂಡಿದ್ದರು. ‘ನೀವೇನು ಚಿಂತೆ ಮಾಡಬೇಡಿ, ಕಂಪನಿಗೆ ಬರಲು ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ನೀವು ಬರಬೇಡಿ. ನಿಮ್ಮ ಸಂಬಳ ಕೊಡುತ್ತೇವೆ’ ಎಂದು ಕಂಪನಿಯವರು ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕೆಲವರು ಕೆಲಸಕ್ಕೆ ಹಾಜರಾಗಿರಲಿಲ್ಲ. ಈಗ ಅಂಥವರಿಗೆ 1 ತಿಂಗಳ ಸಂಬಳ ನೀಡದೇ ಕಂಪನಿ ವಂಚಿಸುತ್ತಿದೆ ಎಂದು ನೊಂದ ಸಿಬ್ಬಂದಿ ‘ವಿಜಯವಾಣಿ’ ಬಳಿ ನೋವು ತೋಡಿಕೊಂಡಿದ್ದಾರೆ.

ಇನ್ನಾದರೂ ಸರ್ಕಾರ ಕಣ್ತೆರೆಯಬೇಕಿದೆ. ಕರೊನಾ ಸೇನಾನಿಗಳಿಗೆ ಸಂಬಳ ನೀಡುವ ಮೂಲಕ ಗೌರವ ನೀಡಬೇಕಿದೆ.

ಸೇನಾನಿಗಳಿಗೆ ಕಿರುಕುಳ: ಆರೋಗ್ಯ ಸಹಾಯವಾಣಿಯಲ್ಲಿ ನೂರಾರು ಯುವಕ- ಯುವತಿಯರು ಕರೊನಾ ತಡೆಗಾಗಿ ಸೇನಾನಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರ ಆರೋಗ್ಯದ ಬಗ್ಗೆ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ. ಸ್ಯಾನಿಟೈಸರ್, ಸೋಪ್ ವ್ಯವಸ್ಥೆ ಮಾಡಿಲ್ಲ. ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನೌಕರರ ಆರೋಪದ ಕುರಿತು ಪ್ರತಿಕ್ರಿಯೆಗಾಗಿ ಕಂಪನಿ ಕೇಂದ್ರ ಕಚೇರಿ ಅಧಿಕಾರಿಗಳನ್ನು ಸಂರ್ಪಸುವ ಯತ್ನ ಫಲಪ್ರದವಾಗಲಿಲ್ಲ.

ಸಂಬಳವನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ಏಕಾಏಕಿ ಲಾಕ್​ಡೌನ್ ಘೊಷಣೆಯಾದ್ದರಿಂದ ಬರಲಾಗಲಿಲ್ಲ. ಅಷ್ಟಕ್ಕೆ 1 ತಿಂಗಳ ಸಂಬಳ ನೀಡದಿರುವುದು ಎಷ್ಟು ಸರಿ. ಸರ್ಕಾರ ಇನ್ನಾದರೂ ನಮ್ಮ ಸಮಸ್ಯೆ ಬಗೆಹರಿಸಲಿ.| ಸಹಾಯವಾಣಿ ನೊಂದ ಸಿಬ್ಬಂದಿ

ಶಿಷ್ಯವೇತನ ಹೆಚ್ಚಳಕ್ಕೆ ಕಿಮ್ಸ್​ ಕಿರಿಯ ವೈದ್ಯರ ಆಗ್ರಹ: ಶಿಷ್ಯವೇತನ ಹೆಚ್ಚಳಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಕಿಮ್ಸ್​ನ ಕಿರಿಯ ವೈದ್ಯರು ಬುಧವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಹಕ್ಕೊತ್ತಾಯ ಮಂಡಿಸಿದರು. ಕೆಲವರು ಬೇಡಿಕೆ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.

ಕಿಮ್ಸ್​ನಲ್ಲಿ 250 ಕಿರಿಯ ವೈದ್ಯರಿದ್ದಾರೆ. ಅವರಿಗೆ ತಿಂಗಳಿಗೆ 30 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತಿದೆ.

ದಿನಕ್ಕೆ 12ರಿಂದ 14 ತಾಸು ಕರ್ತವ್ಯ ನಿರ್ವಹಿಸುವ ನಮ್ಮನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. 2015ರಿಂದ ಶಿಷ್ಯವೇತನ ಹೆಚ್ಚಳ ಮಾಡಿಲ್ಲ. ಕರೊನಾ ಸಂದರ್ಭದಲ್ಲಿ ನಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮನ್ನು ನಿರ್ಲಕ್ಷಿಸಬಾರದು. ಕೂಡಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರು ನಮ್ಮ ಮನವಿಗೆ ಸ್ಪಂದಿಸಬೇಕು. ಶಿಷ್ಯ ವೇತನ ಹೆಚ್ಚಳ ಮಾಡಬೇಕು. ಇಲ್ಲವಾದರೆ ವೈದ್ಯಕೀಯ ಶಿಕ್ಷಣವೆಂಬುದು ವಿದ್ಯಾರ್ಥಿಗಳ ಪಾಲಿಗೆ ಸಾಲದ ಹೊರೆಯಾಗಲಿದೆ. ಎರಡು ದಿನ ಈ ಪ್ರತಿಭಟನೆ ಮುಂದುವರಿಯಲಿದ್ದು, ಮೇ 7ರಂದು ಸಂಜೆ 7 ಗಂಟೆಗೆ ಮೇಣದ ಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕಿಮ್್ಸ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್ ದೇಸಾಯಿ ತಿಳಿಸಿದರು.

ಉಪಾಧ್ಯಕ್ಷರಾದ ಡಾ. ಅರವಿಂದ, ಡಾ. ಶ್ರುತಿ ಕುಲಕರ್ಣಿ, ಖಜಾಂಚಿ ಡಾ. ವಿನೋದ ಕುಮಾರ ಎಲ್., ಡಾ. ಗವಿಸಿದ್ದೇಶ, ಡಾ. ಫರ್ಹಾಜ್, ಕಾರ್ಯದರ್ಶಿ ಡಾ. ಪ್ರೇಮ್ ವಕ್ತಾರ ಡಾ. ಚೇತನ್ ಟಿ.ಎಲ್., ಡಾ. ಮೋಹಿತ್ ಇತರರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು.