ನಗರ: ಮೂಡುಗೊಪ್ಪ (ನಗರ) ಗ್ರಾಪಂಯಲ್ಲಿ ಸೋಮವಾರ ಏರ್ಪಡಿಸಿದ್ದ ಕರೊನಾ ಸಭೆಯಲ್ಲಿ ನೋಡಲ್ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರೊನಾ ಸೇನಾನಿಗಳು ಸಭೆ ಬಹಿಷ್ಕರಿಸಿ ಹೊರನಡೆದರು.
ಪಾಸಿಟಿವ್ ಬಂದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸೇನಾನಿಗಳಿಗೆ ಸೂಕ್ತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಚರ್ಚೆ ನಡೆಯಿತು. ಈ ವೇಳೆ ಸದಸ್ಯರು ಏರುಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಅಧಿಕಾರಿಗಳು ನಿಮ್ಮ ಸಮಸ್ಯೆ ಏನು ಹೇಳಿ. ಸಭೆಗೆ ಔಚಿತ್ಯವಲ್ಲದ ವಿಷಯಗಳ ಮೇಲೆ ಚರ್ಚೆ ಬೇಡ. ಸಭೆಯಲ್ಲಿ ಗಟ್ಟಿಯಾಗಿ ಮಾತನಾಡುವುದು ಕರೊನಾ ಹರಡುವುದಕ್ಕೆ ಕಾರಣವಾಗುತ್ತದೆ. ಸರ್ಕಾರದಿಂದ ಯಾವ ಸೂಚನೆಯಿದೆಯೋ ಅದನ್ನು ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ಕರೊನಾ ಸೇನಾನಿಗಳು ಮತ್ತು ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ 3 ಪಾಸಿಟಿವ್ ಪತ್ತೆಯಾಗಿವೆ. ಹೀಗಿದ್ದರೂ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಪಡೆ ಸದಸ್ಯರು ಮತ್ತು ಸೇನಾನಿಗಳು ಎಲ್ಲವನ್ನು ನೀವೇ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಮಾಜಿ ಅಧ್ಯಕ್ಷೆ ಲತಾ ನಾಗೇಶ್, ಗ್ರಾಮಪಡೆ ಸದಸ್ಯರಾದ ಕರುಣಾಕರಶೆಟ್ಟಿ, ಎ.ಎನ್.ಆದಿರಾಜ್, ಸತೀಶಗೌಡ, ಹಿಲ್ಕುಂಜಿ ಕುಮಾರ್, ಕೆ.ಬಿ.ಕುಮಾರ್, ಬಿ.ವೈ.ರವೀಂದ್ರ , ನಿತಿನ್ ನಗರ, ರಾಜೇಶ್ ಹಿರಿಮನೆ, ಮಧುಕರಶೆಟ್ಟಿ, ಇತರರು ಸಭೆ ಬಹಿಷ್ಕರಿಸಿ ಹೊರನಡೆದರು. ಕೆಲಕಾಲ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಶಾಸಕರಿಗೆ ದೂರು: ಈ ವೇಳೆ ಗ್ರಾಮಪಡೆ ಸದಸ್ಯ ಸತೀಶಗೌಡ ಶಾಸಕರಿಗೆ ದೂರವಾಣಿ ಮಾಡಿ ಅಧಿಕಾರಿಗಳ ವರ್ತನೆ ಬಗ್ಗೆ ದೂರು ನೀಡಿದರು. ಶಾಸಕ ಆರಗ ಜ್ಞಾನೇಂದ್ರ ನೋಡಲ್ ಅಧಿಕಾರಿ ಸಂತೋಷ್ ಸತಾಳಿ ಜತೆ ಮಾತನಾಡಿ, ಸದಸ್ಯರ ನಡುವೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ನಗರ ಸಂಯುಕ್ತ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರಣೀತ್, ಪಿಡಿಒ ವಿಶ್ವನಾಥ್, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಮೂಡುಗೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಪ್ರಕರಣ ಕರೊನಾ ಪಾಸಿಟಿವ್ ಪತ್ತೆಯಾಗಿವೆ. ಆದರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೇ ನಮ್ಮನ್ನೇ ಕೇವಲ ಮಾಡಿ ಉಡಾಫೆ ಉತ್ತರ ಕೊಡುತ್ತಾರೆ. ಅವರಿಗೆ ನಮ್ಮ ಸೇವೆ ಬೇಡವಂತೆ. ಅವರೇ ಮಾಡಿಕೊಳ್ಳಲಿ ಬಿಡಿ.
| ಎಚ್.ವೈ.ಸತೀಶ್ ಗೌಡ, ಗ್ರಾಮಪಡೆ ಸದಸ್ಯ
ನೋಡಲ್ ಅಧಿಕಾರಿಯಾಗಿ ಪ್ರಥಮ ಸಭೆ ಮಾಡುತ್ತಿದ್ದೇನೆ. ನನಗೆ ಆರೋಗ್ಯ ಬೇರೆ ಸರಿಯಿಲ್ಲ. ನಿಧಾನವಾಗಿ ಮಾತನಾಡಿ. ಸಮಸ್ಯೆ ಬಗೆಹರಿಸಿಕೊಳ್ಳೋಣ. ಸರ್ಕಾರದ ಸೌಲಭ್ಯದ ಕುರಿತು ಸಮನ್ವಯತೆಯಿಂದ ರ್ಚಚಿಸೋಣ ಎಂದಿದ್ದೇನೆ. ಸದಸ್ಯರನ್ನು ಕೇವಲವಾಗಿ ನೋಡಿಲ್ಲ, ಉಡಾಫೆ ಉತ್ತರ ನೀಡಿಲ್ಲ.
| ಸಂತೋಷ್ ಸತಾಳಿ, ನೋಡೆಲ್ ಅಧಿಕಾರಿ