ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕರೊನಾದಂತಹ ಸಂಕಷ್ಟ ಕಾಲದಲ್ಲಿ ಹೆತ್ತ ಮಕ್ಕಳೆ ಮುಂದೆ ನಿಂತು ಶವಸಸ್ಕಾರ ನೆರವೇರಿಸಲು ಹೆದರುತ್ತಿದ್ದ ಸಂದರ್ಭದಲ್ಲಿ ಶಾಸಕನಾಗಿ ಜವಾಬ್ದಾರಿಯುತ ಕೆಲಸ ಮಾಡಿದ್ದೇನೆ. ಬೆಳಗ್ಗೆ ಸಂಜೆ ಸೇರಿದಂತೆ ದಿನಕ್ಕೆ ಮೂರು ಬಾರಿ ಕೋವಿಡ್ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿ ಕಾಫಿ, ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡುವ ಜತೆಗೆ ಕೋವಿಡ್ ಸೋಂಕಿತರನ್ನು ಮಾತನಾಡಿಸುತ್ತಿದ್ದೆ. ಆದರೆ ದೇವರ ದಯೆಯಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ ಎಂದರು.
ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಚುನಾವಣೆ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ. ನನಗೆ ಮಂತ್ರಿಯಾಗಿ ಕೆಲಸ ಮಾಡಲು ಸಿಕ್ಕಿದ ಅವಕಾಶದಲ್ಲಿ ಒಂದು ಅಡಿ ಜಾಗವೂ ನೀರಾವರಿಯಿಂದ ವಂಚಿತ ಆಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಗ್ರಾಮದಿಂದ ಕೆ.ಆರ್.ಪೇಟೆ ಮುಖ್ಯ ರಸ್ತೆಗೆ ತೆರಳುವ ಸಂಪರ್ಕ ರಸ್ತೆ ಹಾಗೂ ಬೇಬಿ ಗ್ರಾಮಕ್ಕೆ ತೆರಳುವ ರಸ್ತೆಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಪೂರೈಸಲು ಮತ್ತೊಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಹೊನಗಾನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ, ಮುಖಂಡರಾದ ಕಣಿವೆ ಯೋಗೇಶ್, ಎಸ್.ಎ.ಮಲ್ಲೇಶ್, ರಾಮಕೃಷ್ಣೇಗೌಡ, ಶಿಂಡಬೋಗನಹಳ್ಳಿ ನಾಗಣ್ಣ, ಸನ್ಮತಿ ಜಯರಾಮು ಇತರರು ಇದ್ದರು.