ಧಾರವಾಡ: ಜಿಲ್ಲೆಯಲ್ಲಿ ನೋವೆಲ್ ಕರೊನಾ ವೈರಸ್ ಸೋಂಕಿತ, ಪೀಡಿತ ಪ್ರಕರಣಗಳು ದಾಖಲಾಗಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು, ಭಯ ಪಡಬಾರದು. ಕರೊನಾ ವೈರಸ್ ಬಗ್ಗೆ ತಿಳಿವಳಿಕೆ ಪಡೆದು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ವೈರಸ್ ನಿಯಂತ್ರಣ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಕರೊನಾ ಬುಧವಾರ ಕರೆದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಫೆ. 20ರಿಂದ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮತ್ತು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 6 ಹಾಸಿಗೆಯ ಪ್ರತ್ಯೇಕ ವಾರ್ಡ್ ಸಿದ್ಧಗೊಳಿಸಲಾಗಿದೆ. ತಜ್ಞ ವೈದ್ಯರು, ಆರೋಗ್ಯ ಸಹಾಯಕರು, ಸಿಬ್ಬಂದಿಗೆ ಅಗತ್ಯ ಮಾಹಿತಿ, ತರಬೇತಿ ನೀಡಲಾಗಿದೆ ಎಂದರು.
ಬಾಧಿತರ ಚಿಕಿತ್ಸೆಗಾಗಿ ಸಿಬ್ಬಂದಿಗೆ ಅಗತ್ಯ ಎನ್ 95 ಮಾಸ್ಕ್, ಪಿಪಿಇ ಕಿಟ್ಗಳನ್ನು ಕಾಯ್ದಿರಿಸಲಾಗಿದೆ. ಶಂಕಿತ ವ್ಯಕ್ತಿಗಳ ಗಂಟಲುದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲು ಅಗತ್ಯ ಪರಿಕರಗಳ ದಾಸ್ತಾನಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸಹಾಯ ಕೇಂದ್ರ ತೆರೆಯಲಾಗಿದೆ. ನಿತ್ಯ ಆಗಮಿಸುವ ಪ್ರಯಾಣಿಕರಿಗೆ ಆರೋಗ್ಯ ಸಿಬ್ಬಂದಿ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ವೈರಸ್ ಬಗ್ಗೆ ಮಾಹಿತಿಗೆ ಆರೋಗ್ಯ ಸಹಾಯವಾಣಿ 104ಕ್ಕೆ ಉಚಿತ ಕರೆ ಮಾಡಬಹುದು ಎಂದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತ ಪಿ. ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಸಂದೀಪ ಪ್ರಭು ಹಾಗೂ ಸಾರಿಗೆ, ಶಿಕ್ಷಣ, ಕಾರ್ವಿುಕ, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪೊಲೀಸರಿಗೂ ಭೀತಿ: ಹುಬ್ಬಳ್ಳಿ: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಕರೊನಾ ವೈರಸ್ನಿಂದಾಗಿ ಪೊಲೀಸರಿಗೂ ಕರೊನಾ ಭೀತಿ ಎದುರಾಗಿದೆ. ವೈರಸ್ ದಾಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಚಿಸಿದೆ. ಕಚೇರಿ ಸುತ್ತಮುತ್ತ ಶುಚಿಯಾಗಿಡುವುದು, ಶೌಚಗೃಹಗಳನ್ನು ಆಗಾಗ ಫಿನಾಯಿಲ್ ಹಾಕಿ ಸ್ವಚ್ಛಗೊಳಿಸುವುದು, ಆಗಾಗ ಡೆಟಾಲ್ನಿಂದ ಕೈತೊಳೆಯುವುದು, ಯಾರಿಗಾದರೂ ವೈರಸ್ ಲಕ್ಷಣ ದೃಢಪಟ್ಟಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೆ ರಜೆ ಪಡೆಯಬೇಕು. ಈ ಕುರಿತು ಸೂಕ್ತ ತಿಳಿವಳಿಕೆ ನೀಡಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.