ಔರಾದ್: ಕರೊನಾ ವಿರುದ್ಧ ಹೋರಾಡುತ್ತ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೊಲೀಸರ ಹಾಗೂ ಆರೋಗ್ಯ ಸಿಬ್ಬಂದಿ ಕಾರ್ಯ ಅಮೋಘವಾದದ್ದು ಎಂದು ತಾಪಂ ಇಒ ಮಾಣಿಕರಾವ ಪಾಟೀಲ್ ಹೇಳಿದರು.
ಶನಿವಾರ ತಾಲೂಕಿನ ಸುಂದಾಳನಲ್ಲಿ ಗ್ರಾಪಂ ವ್ಯಾಪ್ತಿಯ ಕರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ತಮ್ಮ ಮನೆಯ ಜಂಜಾಟವನ್ನು ಬಿಟ್ಟು ಸಮಾಜದ ಏಳ್ಗೆಗಾಗಿ ಹಾಗೂ ಕರೊನಾ ನಿಯಂತ್ರಣಕ್ಕಾಗಿ ವಾರಿಯರ್ಸ್ಗಳು ಸಲ್ಲಿಸುತ್ತಿರುವ ಶ್ಲಾಘನೀಯ. ಇವರ ಕಾರ್ಯಕ್ಕೆ ಎಲ್ಲರೂ ಸಹಕಾರವನ್ನು ನೀಡಿ ಗೌರವಿಸಬೇಕು ಎಂದರು.
ತಾಪಂ ಸಹಾಯಕ ಯೋಜನಾಧಿಕಾರಿ ಶಿವಕುಮಾರ ಘಾಟೆ ಮಾತನಾಡಿ, ಪ್ರಾಣದ ಭಯದ ನಡುವೆಯೂ ಜನಸೇವೆಗಾಗಿ ಕೆಲವರು ತಮ್ಮ ಮನೆ, ಸಂಸಾರವನ್ನು ಬಿಟ್ಟು ಹಗಲು ರಾತ್ರಿ ಎನ್ನದೆ ಸರ್ಕಾರದ ಆದೇಶ ಪಾಲಿಸಿ ಕರೊನಾ ವಿರುದ್ಧ ಹೋರಾಡುತ್ತಿರುವುದು ಸಾಮಾನ್ಯ ಮಾತಲ್ಲ. ವಾರಿಯರ್ಸ್ಗಳಿಗೆ ಸಾರ್ವಜನಿಕರು ಸಹಕರಿಸಿ, ಕರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಪಿಡಿಒ ನಾಗೇಶ ಮುಕ್ರಂಬೆ, ಗುಂಡಯ್ಯ ಸ್ವಾಮಿ, ಶಿವರಾಜ ದೇಶಮುಖ, ದಯಾನಂದ ಹಳ್ಳಿಖೇಡೆ, ಬಸವಂತರಾವ ಪಾಟೀಲ್, ಕಲಾವತಿ ಯನಗುಂದಾ, ಡಾ.ಮೀನಾಕ್ಷಿ, ಮಲ್ಲಿಕಾರ್ಜುನ ಟಂಕಸಾಲೆ ಇತರರಿದ್ದರು.