ಹಿರೇಕೆರೂರ: ದೇಶದಲ್ಲಿ ಕರೊನಾ ವೈರಸ್ ಹರಡದಂತೆ ತಡೆಗಟ್ಟುವಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ವಿುಕರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಭಾನುವಾರ ಪಟ್ಟಣ ಹಾಗೂ ತಾಲೂಕಿನ ಹೋಬಳಿ ಗ್ರಾಮಗಳಲ್ಲಿ ಏರ್ಪಡಿಸಿದ್ದ ಕರೊನಾ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಲಾಕ್ ಡೌನ್ ಸೇರಿ ಕೆಲವು ಕಠಿಣ ಕ್ರಮಗಳಿಂದಾಗಿ ಕರೊನಾ ವೈರಸ್ ಇಲ್ಲಿಯವರೆಗೆ ನಿಯಂತ್ರಣದಲ್ಲಿದೆ. ಜಗತ್ತಿನ ಇತರೆ ರಾಷ್ಟ್ರಗಳು ಪ್ರಧಾನಿ ಮೋದಿಯವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಲಾಕ್ ಡೌನ್ ಅಂತ್ಯದವರೆಗೂ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ತಹಸೀಲ್ದಾರ್ ರಿಯಾಜುದ್ದೀನ್ ಭಾಗವಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ. ದೇವರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ, ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಮಂಜುನಾಥ ಪಂಡಿತ, ಪಿಎಸ್ಐ ದೀಪು ಎಂ.ಟಿ., ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಕವಿತಾ ಹಾರ್ನಳ್ಳಿ, ಸುಧಾ ಚಿಂದಿ, ವಿಜಯಶ್ರೀ ಬಂಗೇರ, ಕರವೇ ಅಧ್ಯಕ್ಷ ಗಿರೀಶ ರ್ಬಾ, ಸೃಷ್ಟಿ ಪಾಟೀಲ, ಡಿ.ಸಿ. ಪಾಟೀಲ ಇತರರಿದ್ದರು.