ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಕವಾಯತು ಆಯೋಜಿಸಲಾಗಿತ್ತು.
ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ. ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಆಕರ್ಷಕ ಕವಾಯತು ನೋಡುಗರ ಗಮನ ಸೆಳೆಯಿತು.
ಪೊಲೀಸ್ ಸಿಬ್ಬಂದಿ ಕೆಲಸದ ಒತ್ತಡವನ್ನು ಸರಿಯಾಗಿ ನಿರ್ವಾಹಿಸಬೇಕಾದರೆ ಆರೋಗ್ಯದ ಕಡೆಗೆ ಗಮನಹರಿಸಬೇಕಿದೆ. ಕೆಲಸದೊಂದಿಗೆ ಕೋವಿಡ್ ಬಗ್ಗೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮವನ್ನು ಎಲ್ಲರೂ ಅನುಸರಿಸಬೇಕು ಎಂದು ಎಂ.ಚಂದ್ರಶೇಖರ್ ಕಿವಿಮಾತು ಹೇಳಿದರು.
ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ವೈಯಕ್ತಿಕ ಜೀವನ ಉತ್ತಮವಾಗಿಸಬೇಕು. ಕರೊನಾ ಸಮಯವಾದರಿಂದ ಲಸಿಕೆ ಪಡೆದಿದ್ದರೂ ನಿರ್ಲಕ್ಷ್ಯ ತೋರದೆ ನಿಯಮ ಪಾಲನೆಯೊಂದಿಗೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಅಪಘಾತದಲ್ಲಿ ಸ್ಥಳದಲ್ಲೇ ಸಾಯುವವರಲ್ಲಿ ಬಹುತೇಕ ಮಂದಿ ಹೆಲ್ಮೆಟ್ ಬಳಸದೇ ಇರುವುದು ಕಾರಣ. ಸ್ಥಳೀಯವಾಗಿ ವಾಹನ ಚಲಾಯಿಸುವಾಗಲೂ ಹೆಲ್ಮೆಟ್ ಬಳಸಬೇಕು. ಇದಕ್ಕಾಗಿ ಇಂಡೋ ಮಿಮ್ ಕಂಪನಿಯು ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ನೀಡಿದೆ. ಜಿಲ್ಲೆಯಲ್ಲಿ ನಿರ್ಭಯಾ ಯೋಜನೆಯಡಿ ಮಹಿಳಾ ದೌರ್ಜನ್ಯವನ್ನು ತಡೆಯಲು 25 ಬೈಕ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಸೈಕಲ್ ವಿತರಣೆ ಮಾಡಲಾಯಿತು. ಇಲಾಖೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಬ್ ಇನ್‌ಸ್ಪೆಕ್ಟರ್‌ಗಳಾದ ಕೆ.ವೆಂಕಟೇಶ್, ಮಂಜುನಾಥ, ಗಜೇಂದ್ರ ಮತ್ತಿತರು ಹಾಜರಿದ್ದರು.