ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಪ್ರತಿರೋಧಕ ಲಸಿಕೆ ಹಾಕಿಸಿಕೊಳ್ಳಲು ಜನರು ಪರದಾಡುವ ಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಕೆಲವು ಲಸಿಕಾ ಕೇಂದ್ರಗಳ ಮುಂದೆ ‘ನೋ ಸ್ಟಾಕ್’ ಎಂದು ಬರೆಯಲಾಗುತ್ತಿದೆ. ಇನ್ನು ಕೆಲ ಕೇಂದ್ರಗಳ ಸಿಬ್ಬಂದಿ ‘ನಾಳೆ ಬನ್ನಿ’ ಎಂದು ಜನರಿಗೆ ಹೇಳುತ್ತಿದ್ದಾರೆ.
ಜೂ. 21ರಂದು ದೇಶಾದ್ಯಂತ ಬಹುದೊಡ್ಡ ಲಸಿಕಾ ಅಭಿಯಾನ ಎಂದು ಆರಂಭಿಸಿದಾಗ ಧಾರವಾಡ ಜಿಲ್ಲೆಯಲ್ಲಿ 201 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜೂ. 28ರಂದು ಈ ಕೇಂದ್ರಗಳ ಸಂಖ್ಯೆ 26ಕ್ಕೆ ಇಳಿದಿದೆ. ಯಾವ ಕೇಂದ್ರಗಳಲ್ಲಿ ಯಾವಾಗ ಲಸಿಕೆ ಲಭ್ಯವಿರುತ್ತದೆ ಎಂಬುದು ಅಲ್ಲಿಯ ಸಿಬ್ಬಂದಿಗೂ ಗೊತ್ತಿರುವುದಿಲ್ಲ. ಜನರು ನಿರಾಶರಾಗಿ ಮನೆಗೆ ಮರಳುವಂತಾಗಿದೆ.
ತಮ್ಮ ಮನೆಯ ಸಮೀಪದಲ್ಲಿಯೇ ಲಸಿಕೆ ಹಾಕಿಸಿಕೊಳ್ಳ ಬಹುದೆಂಬ ನಿರೀಕ್ಷೆ ವಾರದಲ್ಲಿಯೇ ಹುಸಿಯಾಗಿದೆ. ಜಿಲ್ಲಾ ಆಸ್ಪತ್ರೆ ಧಾರವಾಡ, ಹುಬ್ಬಳ್ಳಿಯಲ್ಲಿ ಕಿಮ್್ಸ ಹಾಗೂ ಆಯಾ ತಾಲೂಕು ಆರೋಗ್ಯ ಕೇಂದ್ರಗಳಿಗೆ ಜನರು ದೌಡಾಯಿಸಬೇಕಾಗಿದೆ. ಲಸಿಕಾ ಅಭಿಯಾನ ಆರಂಭಿಸಿದಾಗ ಹು-ಧಾ ಅವಳಿ ನಗರದಲ್ಲಿ
ವಾರ್ಡ್ಗೆ ಒಂದರಂತೆ 67 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜೂ. 28ರಂದು 20 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗಿದೆ. ಇದರಲ್ಲೂ ಕೆಲವು ಕೇಂದ್ರಗಳ ಮುಂದೆ ಮಧ್ಯಾಹ್ನ 1 ಗಂಟೆಯ ವೇಳೆಗೆ ನೋ ಸ್ಟಾಕ್ ಎಂದು ಬೋರ್ಡ್ ಹಾಕಲಾಗಿತ್ತು. ಇನ್ನುಳಿದ ಕೇಂದ್ರಗಳಲ್ಲಿ ಸೋಮವಾರ ಲಸಿಕಾಕರಣವೇ ನಡೆಯಲಿಲ್ಲ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಬಳಿಯ ವಿವೇಕಾನಂದ ನಗರ ರೋಟರಿ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯ ಲಸಿಕಾ ಕೇಂದ್ರಕ್ಕೆ ಇಂದು ಲಸಿಕೆ ಪೂರೈಕೆಯಾಗಿರಲಿಲ್ಲ. ಈ ಕುರಿತು ಪಾಲಿಕೆ ವಲಯ ಕಚೇರಿ (ನಂ. 6) ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ. ಹೀಗಿರುವಾಗ ಜನರಿಗೆ ಹೇಗೆ ತಿಳಿಯಲು ಸಾಧ್ಯ? ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಕ್ಕೆ ಬರುತ್ತಿದ್ದ ಜನರು ನಿರಾಸೆಯಿಂದ ತೆರಳುತ್ತಿದ್ದರು. ಇಲ್ಲಿ ‘ನೋ ಸ್ಟಾಕ್’ ಎಂಬ ಬರಹವೂ ಇರಲಿಲ್ಲ.
ರಾಜನಗರಕ್ಕೆ ಸ್ಥಳಾಂತರಗೊಂಡಿರುವ ಮೇದಾರ ಓಣಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ಗೆ ನೋ ಸ್ಟಾಕ್ ಎಂದು ಬರೆಯಲಾಗಿತ್ತು. ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆ, ಕಿಮ್್ಸ ಆಸ್ಪತ್ರೆ ಲಸಿಕಾ ಕೇಂದ್ರಗಳಲ್ಲಿ ಎಂದಿನಂತೆ ಜನದಟ್ಟಣೆ ಹೆಚ್ಚಿತ್ತು.
ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್, ವಯಸ್ಕರಿಗೆ ಬರೆ
ಧಾರವಾಡ ಜಿಲ್ಲಾಡಳಿತವು ಸೋಮವಾರದಿಂದ ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ಆರಂಭಿಸಿದೆ. ಜಿಲ್ಲಾ ಲಸಿಕಾ ಭಂಡಾರದಲ್ಲಿ (ಡಿವಿಎಸ್) ದಾಸ್ತಾನು ಇದ್ದ 14700 ಡೋಸ್ಗಳಲ್ಲಿ 11100 ಡೋಸ್ಗಳನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದೆ. ಇದರಲ್ಲಿ ಮೊದಲ ದಿನ ವಿದ್ಯಾರ್ಥಿಗಳಿಗಾಗಿ ಧಾರವಾಡದ 2 ಕಾಲೇಜ್ಗಳಿಗೆ ಹಾಗೂ ಹುಬ್ಬಳ್ಳಿಯ 4 ಕಾಲೇಜ್ಗಳಿಗೆ ಒಟ್ಟು 790 ಕೊವ್ಯಾಕ್ಸಿನ್ ಹಾಗೂ 780 ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. ಇದರಿಂದ ವಯಸ್ಕರಿಗೆ ಲಸಿಕೆ ಕೊರತೆ ಎದುರಾಗಿರುವುದು ಸ್ಪಷ್ಟವಾಗಿದೆ. ವಯಸ್ಕರಿಗೆ 10 ಸಾವಿರ ಡೋಸ್ಗಳು ಮಾತ್ರ ಹಂಚಿಕೆಯಾಗಿದ್ದವು. ಕಳೆದ ವಾರ ಲಸಿಕಾ ಅಭಿಯಾನ ಆರಂಭಿಸಿದ ಮೊದಲ ದಿನ 27642 ಜನರಿಗೆ ಲಸಿಕೆ ಹಾಕಿ ಜಿಲ್ಲಾಡಳಿತ ದಾಖಲೆ ಮಾಡಿತ್ತು. ಜೂ. 27ರಂದು 9 ಸಾವಿರಕ್ಕೆ ಇಳಿದಿದೆ.
ಕಾಲೇಜ್ ತರಗತಿ ಆರಂಭಿಸಬೇಕಾದರೆ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಆಗಿರಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಇದರಿಂದ ವಿದ್ಯಾರ್ಥಿಗಳಿಗಾಗಿ ಲಸಿಕಾ ಅಭಿಯಾನ ನಡೆಸುವುದು ಅನಿವಾರ್ಯವಾಗಿದೆ. ಆದರೆ, ವಯಸ್ಕರಿಗೆ ಲಸಿಕೆ ಕೊರತೆ ಉಂಟಾಗುತ್ತದೆ ಹಾಗೂ ಎಲ್ಲ ಲಸಿಕಾ ಕೇಂದ್ರಗಳು ನಿಯಮಿತವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಜನತೆಗೆ ತಿಳಿಸುವ ಕನಿಷ್ಠ ಸೌಜನ್ಯವನ್ನು ಜಿಲ್ಲಾಡಳಿತ ತೋರಿಸಿಲ್ಲ.
ಈ ಕುರಿತು ಪ್ರತಿಕ್ರಿಯೆಗಾಗಿ ‘ವಿಜಯವಾಣಿ’ ಸಂರ್ಪಸಿದಾಗ ಜಿಲ್ಲಾಧಿಕಾರಿ ಕರೆ ಸ್ವೀಕರಿಸಲಿಲ್ಲ.
ಲಸಿಕೆ ಲಭ್ಯತೆಗೆ ಅನುಗುಣವಾಗಿ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಸರ್ಕಾರದಿಂದ ಸೋಮವಾರ ಲಸಿಕೆ ಪೂರೈಕೆ ಆಗಿಲ್ಲ. ಜಿಲ್ಲಾ ಲಸಿಕಾ ಭಂಡಾರದಿಂದ 11,100 ಡೋಸ್ಗಳನ್ನು ವಿದ್ಯಾರ್ಥಿಗಳಿಗಾಗಿಯೇ ಮೀಸಲಿಟ್ಟು ಅಭಿಯಾನ ಆರಂಭಿಸಲಾಗಿದೆ.| ಡಾ. ಎಸ್.ಎಂ. ಹೊನಕೇರಿಜಿಲ್ಲಾ ಲಸಿಕಾಕರಣ ನೋಡಲ್ ಅಧಿಕಾರಿ