ಗಜೇಂದ್ರಗಡ: ಕರೊನಾ ಮಹಾಮಾರಿ ಕೇವಲ ಒಂದು ವೈರಸ್ ಮಾತ್ರ. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ಆತ್ಮವಿಶ್ವಾಸವಿದ್ದರೆ ಈ ಹೋರಾಟದಲ್ಲಿ ಯಶಸ್ಸು ಕಾಣುತ್ತೇವೆ ಎಂದು ಕಸಾಪ ತಾಲೂಕು ಅಧ್ಯಕ್ಷ ಐ.ಎ. ರೇವಡಿ ಹೇಳಿದರು.
ಪಟ್ಟಣದ ವೆಂಕೂಸಾ ಭಾಂಡಗೆ ಅವರ ಮನೆಯಲ್ಲಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕರೊನಾಗೆ ಇನ್ನೂ ಔಷಧಗಳು ಬಂದಿಲ್ಲ ನಿಜ. ಆದರೆ, ಇದಕ್ಕೆ ಔಷಧ ನಮ್ಮ ಬಳಿಯೇ ಇದೆ. ಆತ್ಮ ವಿಶ್ವಾಸ ಮತ್ತು ರೋಗನಿರೋಧಕ ಶಕ್ತಿ, ಹಾಗೂ ವೈದ್ಯರ ಮಾರ್ಗದರ್ಶನ ಪಾಲಿಸಿದರೆ ಮಹಾಮಾರಿ ನಮ್ಮಿಂದ ದೂರ ಹೋಗುತ್ತದೆ. ಇದಕ್ಕೆ ಉದಾಹರಣೆ 104 ವರ್ಷದ ಸ್ವಾತಂತ್ರ್ಯ ಹೋರಾಟಗಾರ ವೆಂಕೂಸಾ ಭಾಂಡಗೆ ಅವರು’ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ, ವೆಂಕೂಸಾ ಭಾಂಡಗೆಯವರ ಬದುಕಿನ ಹಾದಿ, ನೇಕಾರಿಕೆಯಲ್ಲಿ ಬದುಕು ಕಟ್ಟಿಕೊಳ್ಳಲು ಅವರು ನಡೆಸಿದ ಹೋರಾಟದ ಹಾದಿ ಹಾಗೂ ಅವರ ಉದಾತ್ತ ವಿಚಾರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.
ಉಪನ್ಯಾಸಕರಾದ ಬಿ.ವಿ. ಮನವಳ್ಳಿ ಉಪನ್ಯಾಸ ನೀಡಿದರು. ಎಂ. ಎಸ್. ಮಕಾನದಾರ, ಶಂಕರ ಕಲ್ಲಿಗನೂರ, ರವಿ ಕುಲಕರ್ಣಿ, ವಿರೂಪಾಕ್ಷಿಸಾ ಭಾಂಡಗೆ, ಅಂಬುಲಾಲ್ ಇತರರಿದ್ದರು.