ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲಾದ್ಯಂತ ಮಕ್ಕಳ ತಜ್ಞ ವೈದ್ಯರ ತಂಡ ಹಳ್ಳಿಗಳಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಮೂಲಕ ಕೋವಿಡ್ ಮೂರನೇ ಅಲೆ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿಯ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಕೋವಿಡ್ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಮಕ್ಕಳಿಗೆ ಜಿಲ್ಲೆಯ ಪ್ರತಿ ತಾಲೂಕಿಲ್ಲಿ ಪ್ರತ್ಯೇಕವಾಗಿ 50 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಹಾಗೂ ಅಂಗವಿಕಲರ ಮಕ್ಕಳಿಗೆ ಎರಡು ತಾಲೂಕಿಗೆ ಒಂದರಂತೆ ಎರಡು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ ಎಂದರು.
ತಜ್ಞ ವೈದ್ಯರ ನೇಮಕ: ಪ್ರತಿ ತಾಲೂಕಿನಲ್ಲಿ 5 ಮಕ್ಕಳ ತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡು ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಆಹಾರ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯುತ್ತಿದ್ದು, ಶಿಕ್ಷಕರು ವಾರಕ್ಕೊಮ್ಮೆ ಕೋವಿಡ್ ಕುರಿತು ಮಾಹಿತಿ ನೀಡುವ ಜತೆಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿರುವ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ನಿಮ್ಹಾನ್ಸ್ ವೈದ್ಯರ ತಂಡದಿಂದ ಹಳ್ಳಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.
ಲಾಕ್‌ಡೌನ್ ತೆರವುಗೊಂಡ ನಂತರ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಬರಲಿದ್ದು, ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು ಹಾಗೂ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸುವುದನ್ನು ಮುಂದುವರಿಸಲಾಗುವುದು ಎಂದರು.
ಜೂ. 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಆದೇಶವಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚು ಲಸಿಕಾ ಕೇಂದ್ರ ತೆರೆಯುವಂತೆ ಸೂಚಿಸಿದರು.
ಮಳೆ ಬಗ್ಗೆ ಇರಲಿ ಎಚ್ಚರ: ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ ಮಾತನಾಡಿ, ಮುಂಗಾರು ಮಳೆ ಆರಂಭವಾಗಿದ್ದು, ನಗರ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಜನ ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಆಕಸ್ಮಿಕವಾಗಿ ಹಾನಿಯಾದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ನೀಡಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ ಜಿ.ರಾಯ್ಕರ್ ಇದ್ದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಕೋವಿಡ್ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮತ್ತಿತರರಿದ್ದರು.