ಔರಾದ್: ಮಹಾಮಾರಿ ಕರೊನಾ ವೈರಸ್ ಸಂಬಂಧ ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಕರೊನಾ ನಿಯಂತ್ರಣ ಮಾಡಬಹುದು ಎಂದು ಸಂತಪುರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಸುವರ್ಣಾ ಹೇಳಿದರು.
ಮಂಗಳವಾರ ಸಂತಪುರ ಗ್ರಾಮದಲ್ಲಿ ಗೃಹ ರಕ್ಷಕ ದಳ ಆಯೋಜಿಸಿದ್ದ ಕರೊನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಡಾ.ಚಂದ್ರಶೇಖರ ಅಮಲಾಪುರೆ ಮಾತನಾಡಿ, ಜ್ವರ, ನೆಗಡಿ, ಕೆಮ್ಮು ಮತ್ತು ಮೈಕೈ ನೋವು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಬಂದು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಡಿಒ ಅನೀಲಕುಮಾರ ಬಿರಾದಾರ, ಎಎಸ್ಐ ಅಶೋಕ ನಿಡೋದೆ, ಗೃಹರಕ್ಷಕ ದಳ ಘಟಕಾಧಿಕಾರಿ ಸಂಗಯ್ಯ ಸ್ವಾಮಿ, ಸಿದ್ದಯ್ಯ ಸ್ವಾಮಿ ಇತರರಿದ್ದರು. ನೂರಾರು ಗೃಹರಕ್ಷಕ ದಳ ಸಿಬ್ಬಂದಿ ಗ್ರಾಮದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಜಂಬಗಿ ರಸ್ತೆ, ಔರಾದ್ ರಸ್ತೆ, ನಾಡ ಕಚೇರಿ ಸೇರಿ ವಿವಿಧೆಡೆ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಿದರು.