ಜಿಲ್ಲೆ

ಕರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ, ಶಾಸಕ ಶರತ್ ಬಚ್ಚೇಗೌಡ ಸೂಚನೆ, ಬಾಬೂಜಿ, ಬಾಬಾ ಸಾಹೇಬರ ಜಯಂತಿ ಸರಳ

ಹೊಸಕೋಟೆ: ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಆದ್ದರಿಂದ ಈ ಬಾರಿ ಬಾಬು ಜಗಜೀವನ ರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಒಂದೇ ದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಪ್ರಗತಿಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಮುಖಂಡರು ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಬಾಬು ಜಗಜೀವನರಾಂ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕರೊನಾ ನಿಯಂತ್ರಿಸುವ ಸಲುವಾಗಿ ಎಲ್ಲರೂ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಇಬ್ಬರು ನಾಯಕರ ಜಯಂತಿಯನ್ನು ಹಲವಾರು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ಸರಳವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ಆದರೆ ಈ ಬಾರಿ ಭಾವಚಿತ್ರ ಮೆರವಣೆಗೆ, ವೇದಿಕೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ದಲಿತ ಸಂಘಟನೆ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ಹಿಂದುಳಿದ ಜನಾಂಗದ ಬಗ್ಗೆ ಅಧಿಕಾರಿಗಳಲ್ಲಿ ಕೀಳರಿಮೆ ಇರುವುದು ಸಭೆಯಲ್ಲಿ ಕಂಡು ಬರುತ್ತಿದೆ. ಸಭೆಗೆ ಸಾಕಷ್ಟು ಅಧಿಕಾರಿಗಳು ಗೈರಾಗಿದ್ದಾರೆ ಎಂದು ಬೇಸರಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ದಲಿತರ ಕುಂದು ಕೊರತೆ ಸಭೆ ಕರೆಯಬೇಕಿದ್ದು, ಹಲವಾರು ವರ್ಷಗಳಿಂದ ಸರ್ಕಾರದ ಮಾರ್ಗಸೂಚಿಯನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ದಲಿತರ ಕುಂದು ಕೊರತೆ ಸಭೆಯನ್ನು ಪ್ರತಿ ಮೂರುತಿಂಗಳಿಗೊಮ್ಮೆ ಕರೆಯುವಂತೆ ಸೂಚಿಸಿದರು.

ತಹಸೀಲ್ದಾರ್ ಗೀತಾ ಮಾತನಾಡಿ, ಸದ್ಯ ಸರ್ಕಾರದ ಮಾರ್ಗಸೂಚಿಯಂತೆ ಜಯಂತಿ ಆಚರಣೆ ಮಾಡಬೇಕು ಎಂದರು.

ತಾಪಂ ಸದಸ್ಯ ಡಾ.ಡಿ.ಟಿ. ವೆಂಕಟೇಶ್, ತಾಪಂ ಇಒ ಶ್ರೀನಾಥ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ದಲಿತ ಸಂಘಟನೆಗಳ ಮುಖಂಡರಾದ ಡಾ.ಎಚ್.ಎಂ. ಸುಬ್ಬರಾಜ್, ಚಿನ್ನಸ್ವಾಮಿ, ಐ.ಆರ್. ನಾರಾಯಣಸ್ವಾಮಿ, ಎ. ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ ಹಾಜರಿದ್ದರು.