ಜಿಲ್ಲೆ

ಕರೊನಾ ಭೀತಿಗಿಂತ ಹೆಚ್ಚಾಯ್ತು ಮದ್ಯದ ಪ್ರೀತಿ !

ಹುಬ್ಬಳ್ಳಿ: ಸತತ 42 ದಿನಗಳಿಂದ ಮದ್ಯಕ್ಕಾಗಿ ಹಾತೊರೆಯುತ್ತಿದ್ದ ನಗರದ ಮದ್ಯಪ್ರಿಯರು ಸೋಮವಾರ ಶಾಂತಿಪ್ರಿಯರಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಮದ್ಯ ಖರೀದಿಸುವ ಮೂಲಕ ಸಂತೃಪ್ತರಾದರು. ಆ ಮೂಲಕ ಮದ್ಯಾರಾಧಕರು ಕರೊನಾ ಭೀತಿ ಮರೆತು ಮದ್ಯ ಪ್ರೀತಿ ಮೆರೆದರು.

ನಗರದ ಗೋಕುಲ ರಸ್ತೆ, ಶಿರೂರ ಪಾರ್ಕ್, ವಿದ್ಯಾನಗರ, ಕ್ಲಬ್ ರಸ್ತೆ, ಸ್ಟೇಶನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಜೆಸಿ ನಗರ, ದೇಶಪಾಂಡೆ ನಗರ, ನ್ಯೂ ಕಾಟನ್ ಮಾರ್ಕೆಟ್, ಬೈರಿದೇವರಕೊಪ್ಪ, ಉಣಕಲ್, ಎಪಿಎಂಸಿ, ನವನಗರ ಸೇರಿ ವಿವಿಧೆಡೆ ಎಂಎಸ್​ಐಎಲ್ ಹಾಗೂ ಸಿಎಲ್2 ಬಾರ್​ಗಳ ಎದುರು ನಸುಕಿನ ಜಾವವೇ ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದರು.

ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆ ಮೊದಲ ಸಾಲಿನಲ್ಲಿದ್ದ ಗ್ರಾಹಕರು ಅತ್ಯಂತ ಖುಷಿಯಿಂದ ಮದ್ಯ ಖರೀದಿಸಿ ಸಂಭ್ರಮಪಟ್ಟರು. ಕ್ಲಬ್ ರಸ್ತೆಯ ಕರ್ನಾಟಕ ವೈನ್ಸ್, ದೇಶಪಾಂಡೆ ನಗರದ ಬಾಟಲ್ ಬಾಕ್ಸ್, ಜೆಸಿ ನಗರದ ಕೆಲ ಬಾರ್​ಗಳ ಬಳಿ ಕಿ.ಮೀ.ಗಟ್ಟಲೇ ಸಾವಿರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಜೆಸಿ ನಗರದ ಒಂದೇ ಕಡೆ ಮೂರು ಬಾರ್​ಗೆ ಅನುಮತಿ ನೀಡಿದ್ದರಿಂದ ಸಾವಿರಾರು ಜನ ಒಂದೆಡೆ ಜಮಾಯಿಸಿದ್ದರು.

ಬೆಳಗ್ಗೆಯಿಂದ ಶಾಂತಿಪ್ರಿಯರಂತೆ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಮದ್ಯಪ್ರಿಯರು ಸಂಜೆಯಾಗುತ್ತಿದ್ದಂತೆ ಅಂತರ ಮರೆತಿದ್ದರು. ನಾಳೆ ಮದ್ಯ ಸಿಗುತ್ತದೋ ಇಲ್ಲವೋ ಎಂದು ಭಾವಿಸಿ ಕೆಲವರು ಎರಡೆರಡು ಬಾರಿ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ್ದಾರೆ. ಆ ಮೂಲಕ ನಗರದಲ್ಲಿ ಮದ್ಯದ ಹೊಳೆಯೇ ಹರಿದಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆದಿದೆ. ಮದ್ಯ ಪ್ರಿಯರಿಗಾಗಿ ಬಾರ್ ಮಾಲೀಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬಾರ್ ಮುಂದೆ ಸಿಸಿಟಿವಿ ಕ್ಯಾಮರಾ, ಬ್ಯಾರಿಕೇಡ್ ಅಳವಡಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್​ಗಳನ್ನು ರಚಿಸಿದ್ದರು. ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಕೈಗೊಂಡಿದ್ದರು. ಮಾಸ್ಕ್ ಧರಿಸಿದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ನೀಡಿದ್ದರು. ಒಬ್ಬರಿಗೆ 2 ಲೀ. ಮದ್ಯ ಹಾಗೂ 18 ಲೀ. ಬಿಯರ್ ಖರೀದಿಗೆ ಅವಕಾಶ ನೀಡಲಾಗಿತ್ತು.

ಸಂಜೆ ಹೊತ್ತಿಗೆ ಮದ್ಯ ಖಾಲಿ: ಬೆಳಗ್ಗೆಯಿಂದಲೇ ಸಾವಿರಾರು ಗ್ರಾಹಕರು ಮದ್ಯ ಖರೀದಿಗೆ ಮುಗಿಬಿದ್ದ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ಹಲವೆಡೆ ದಾಸ್ತಾನು ಖಾಲಿಯಾಗಿತ್ತು. ಇಲ್ಲಿನ ದೇಶಪಾಂಡೆ ನಗರದ ಬಾಟಲ್ ಬಾಕ್ಸ್ ಮಳಿಗೆಯಲ್ಲಿ ಸಂಜೆ 4 ಗಂಟೆ ಹೊತ್ತಿಗೆ ವಿಸ್ಕಿ, ಬ್ರಾಂಡಿ, ರಮ್ ವೋಡ್ಕಾ ಮತ್ತಿತರ ಮದ್ಯ ಖಾಲಿಯಾಗಿದೆ. ಕೇವಲ ಬಿಯರ್ ಲಭ್ಯವಿದೆ ಎಂದು ಮಾಲೀಕರು, ಸಿಬ್ಬಂದಿ ಕೂಗಿ ಹೇಳುತ್ತಿದ್ದರು. ಗಂಟೆಗಟ್ಟಲೇ ಸರತಿಯಲ್ಲಿ ನಿಂತಿದ್ದ ಮದ್ಯಪ್ರಿಯರು ನಿರಾಶರಾದರಾದರೂ, ಸಿಕ್ಕಿದ್ದೇ ಸೀರುಂಡೆ ಎಂದು ಬಿಯರ್ ಖರೀದಿಸಿ ಮನೆ ಕಡೆಗೆ ಮುಖ ಮಾಡಿದರು.

ಅಂತರ ಮರೆತ ಮದ್ಯಪ್ರಿಯರು: ಹಳೇ ಹುಬ್ಬಳ್ಳಿ ಇಂಡಿ ಪಂಪ್ ಬಳಿ ಬಾರ್​ನಲ್ಲಿ ಮದ್ಯ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಾವಿರಾರು ಗ್ರಾಹಕರು ಪರಸ್ಪರ ಅಂತರ ಮರೆತಿದ್ದರು. ಒಬ್ಬರಿಗೊಬ್ಬರು ಅಂಟಿಕೊಂಡೇ ನಿಂತಿದ್ದರು. ಕೆಲವರು ಗುಂಪು ಗುಂಪಾಗಿ ಹರಟೆ ಹೊಡೆಯುತ್ತಿದ್ದರು. ಕರೊನಾ ವೈರಸ್ ಭಯವಿಲ್ಲದೇ ಮದ್ಯಕ್ಕಾಗಿ ಹಪಹಪಿಸುತ್ತಿದ್ದರು.

2 ಕೋಟಿ ವಹಿವಾಟು: ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಅಂದಾಜು 2 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ತಿಳಿದುಬಂದಿದೆ.