ಹಾನಗಲ್ಲ: ಕರೊನಾ ವೈರಸ್ ಭಯದಿಂದಾಗಿ ತಾಲೂಕು ಕೇಂದ್ರಕ್ಕೆ ಬರುವ ಗ್ರಾಮಸ್ಥರ ಸಂಖ್ಯೆ ಇಳಿಮುಖವಾಗಿದ್ದಲ್ಲದೆ. ಪಟ್ಟಣದಲ್ಲಿರುವವರೂ ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ.
ಭಾನುವಾರ ಪಟ್ಟಣದ ಇಬ್ಬರು ಹಜ್ ಯಾತ್ರಿಗಳು ಕೆಮ್ಮು, ನೆಗಡಿ ಜ್ವರದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಡುತ್ತಿದ್ದಂತೆ ಹಾನಗಲ್ಲಿನ ವಾತಾವರಣವೇ ಬದಲಾಗಿದೆ. ಸೋಮವಾರ ಪಟ್ಟಣದ ರಸ್ತೆಗಳೆಲ್ಲ ಜನರಿಲ್ಲದೆ ಭಣಗುಡುತ್ತಿದ್ದವು. ಅಲ್ಲಲ್ಲಿ ಜನರು ಗುಂಪು-ಗುಂಪಾಗಿ ಕರೊನಾ ವೈರಸ್ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಚರ್ಚೆಗಳು ನಡೆಸುತ್ತಿರುವುದು ಕಂಡುಬಂತು.
ಇನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಹಾನಗಲ್ಲನಿಂದ ನರೇಗಲ್ ಗ್ರಾಮಕ್ಕೆ ಓಡಾಡುವ ಗ್ರಾಮೀಣ ಬಸ್ ಪ್ರತಿ ಸೋಮವಾರ ಕನಿಷ್ಠ 10 ಸಾವಿರ ಸಂಗ್ರಹಿಸುತ್ತಿತ್ತು. ಆದರೆ, ಸೋಮವಾರ ಬಸ್ನ ನಿರ್ವಾಹಕರೇ ಹೇಳುವಂತೆ 5 ಸಾವಿರ ರೂ. ಕೂಡ ದಾಟಿಲ್ಲ. ಹುಬ್ಬಳ್ಳಿ-ಹಾನಗಲ್ಲ ಮಾರ್ಗದ ಬಸ್ನಲ್ಲಿಯೂ ಪ್ರಯಾಣಿಕರ ಸಂಚಾರ ವಿರಳವಾಗಿದೆ. ದಿನಂಪ್ರತಿ 14 ಸಾವಿರ ಆದಾಯ ತರುತ್ತಿದ್ದ ಈ ಮಾರ್ಗದಲ್ಲಿ ಕೇವಲ 6500 ರೂ. ಮಾತ್ರ ಗಳಿಕೆಯಾಗಿದೆ. ಹಾನಗಲ್ಲ ಬಸ್ ಘಟಕದ ಒಟ್ಟು ಆದಾಯ 16 ಲಕ್ಷ ರೂ. ಇದ್ದು ಈಗ ಕೇವಲ 8 ಲಕ್ಷ ರೂ.ಗಳಿಗೆ ಇಳಿಕೆಯಾಗಿದ್ದು, ಅರ್ಧದಷ್ಟು ಆದಾಯ ಹಾನಿಯಾಗುತ್ತಿದೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪುರಸಭೆ ಹಾಗೂ ತಾಲೂಕು ಆಡಳಿತ ನೀಡಿರುವ ಲಿಖಿತ ನಿರ್ದೇಶನದಂತೆ ಪಟ್ಟಣದ ಹೋಟೆಲ್ ಮಾಲೀಕರು ಹೋಟೆಲ್ಗಳನ್ನು ಬಂದ್ ಮಾಡಿದ್ದಾರೆ. ಇದರೊಂದಿಗೆ ಎಲ್ಲ ಖಾನಾವಳಿಗಳೂ ಬಾಗಿಲು ಮುಚ್ಚಿವೆ. ಆರೋಗ್ಯ ಇಲಾಖೆ ಪಟ್ಟಣದ ಕೆಲವು ಭಾಗಗಳಲ್ಲಿ ಸಿಬ್ಬಂದಿ ಮೂಲಕ ಕರೊನಾ ವೈರಸ್ ಜನ ಜಾಗೃತಿಗಾಗಿ ಬೂತ್ಗಳನ್ನು ಸ್ಥಾಪಿಸಿದೆ. ಪುರಸಭೆ ವಾಹನಗಳ ಮೂಲಕ ಧ್ವನಿವರ್ಧಕದಲ್ಲಿ ಜನಜಾಗೃತಿ ಮೂಡಸಲಾಗುತ್ತಿದೆ. ಒಟ್ಟಿನಲ್ಲಿ ಪಟ್ಟಣದ ತುಂಬೆಲ್ಲ ಕರೊನಾ ವೈರಸ್ನ ಭಯ ಎಲ್ಲರನ್ನೂ ಭಯದ ನೆರಳಿನಲ್ಲಿರಿಸಿದೆ.
ಊಹಾಪೋಹಗಳಿಗೆ ಕಿವಿಗೊಡಬೇಡಿ: ಪಟ್ಟಣದ ಕೆಲವು ವ್ಯಕ್ತಿಗಳನ್ನು ಆರೋಗ್ಯ ತಪಾಸಣೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ಸೇರಿ ಬೀದಿ ಬದಿಗಳಲ್ಲಿ ಹಲವು ಊಹಾಪೋಹಗಳು ವ್ಯಕ್ತವಾಗುತ್ತಿವೆ. ವಾಸ್ತವ ಸಂಗತಿಗಳಲ್ಲದ ಇಂಥ ಮಾಹಿತಿಗಳನ್ನು ಹರಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ಸಂಬಂಧಿಸಿದ ಇಲಾಖೆಗಳು ಈ ಕುರಿತು ಕ್ರಮ ಜರುಗಿಸಲಿವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ತಿಳಿಸಿದ್ದಾರೆ.