ಜಿಲ್ಲೆ

ಕರೊನಾ, ನಿಯಮ ಪಾಲಿಸದಿದ್ದರೆ ದಂಡ

ವಿಜಯಪುರ: ಮಹಾಮಾರಿ ಕರೊನಾ ಹಿನ್ನೆಲೆ ಸರ್ಕಾರದ ಅನ್‌ಲಾಕ್-5 ಮಾರ್ಗಸೂಚಿ ಮತ್ತು ಸರ್ಕಾರದ ಆದೇಶದಂತೆ ಮಾಸ್ಕ್ ಧರಿಸದೆ ಇರುವ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳದೆ ಇದ್ದರೆ ದಂಡ ಖಚಿತ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಎಚ್ಚರಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1000 ರೂ. ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿ ಪ್ರದೇಶ ಹೊರತುಪಡಿಸಿ(ನಗರ ಮತ್ತು ಗ್ರಾಮೀಣ ಪ್ರದೇಶ)ಗಳಲ್ಲಿ 500 ರೂ. ದಂಡವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿಗಳ ಪರಸ್ಪರ ಅಂತರ ಕಾಯ್ದುಕೊಳ್ಳದ, ಅಂಗಡಿ-ಮುಂಗಟ್ಟುಗಳ ಮುಂದೆ ಗ್ರಾಹಕರಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳದ, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವವರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸದೆ ಇರುವವರಿಂದ ಈ ದಂಡವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.