ಚಿತ್ತಾಪುರ: ಕರೊನಾ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇಲ್ಲಿವರೆಗೂ ಸೋಂಕು ನಿವಾರಣೆಗಾಗಿ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಪಿಡಬ್ಲೂಡಿ, ಶಿಕ್ಷಣ ಇಲಾಖೆ, ಸಣ್ಣ ಕೈಗಾರಿಕೆ,ಆರ್ ಐಡಿಎಫ್ ಇಲಾಖೆಯಿಂದ 16.18 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಕಲಬುರಗಿಯಲ್ಲಿ ಜಿಮ್ಸ್, ಜಯದೇವ, ಇಎಸ್ಐಸಿ ಸೇರಿ ಹಲವಾರು ಸುಸಜ್ಜಿತ ವೈದ್ಯಕೀಯ ಸಂಸ್ಥೆಗಳಿವೆ. ಆದರೆ ಟೆಸ್ಟಿಂಗ್ ಪ್ರಮಾಣ ಮಾತ್ರ ನಿಧಾನಗತಿಯಲ್ಲಿ ನಡೆಯುತ್ತಿವೆ. ಇದರಿಂದ 7 ಸಾವಿರ ಜನರ ವರದಿ ಬರಬೇಕಿದೆ. ಮನಸ್ಸು ಮಾಡಿದರೆ ನಿತ್ಯ 700ಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಬಹುದು, ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಕರೊನಾ ನಿರ್ವಹಣೆಗೆ ಸಂಸದ ಡಾ. ಉಮೇಶ ಜಾಧವ್ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಮೋದಿಯವರು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕೇವಲ ಘೋಷಣೆಗೆ ಸೀಮಿತವಾಗಿದ್ದು, 20 ರೂ. ಸಹ ಯಾರೊಬ್ಬರಿಗೂ ತಲುಪಿಲ್ಲ. ವಿವಿಧ ಯೋಜನಗೆಳ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜಿಪಂ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್ ಮಾತನಾಡಿದರು.
ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿಗೌಡ ನಾಲವಾರ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಹಸೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಪ್ರಮುಖರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ಅಜೀಜ್ಸೇಠ್, ಶ್ರೀನಿವಾಸ ಸಗರ, ವೀರಣ್ಣಗೌಡ ಪರಸರೆಡ್ಡಿ, ಮುಕ್ತಾರ್ ಪಟೇಲ್, ರಾಜಶೇಖರ ತಿಮ್ಮನಾಕ್, ಈರಪ್ಪ ಬೋವಿ, ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಪಾಶಾಮಿಯ್ಯ ಖುರೈಷಿ, ಮಲ್ಲಿಕಾಜರ್ುನ ಕಾಳಗಿ, ಶ್ರೀನಿವಾಸರಡ್ಡಿ ಪಾಲಪ್, ಇದ್ದರು. ಬಸವರಾಜ ಚಿನಮಳ್ಳಿ ನಿರೂಪಣೆ ಮಾಡಿದರು.
ಬಿಜೆಪಿಯ ಕೆಲ ಶಾಸಕರು ಹಾಗೂ ಮಾಜಿ ಶಾಸಕರು ತಮ್ಮಿಷ್ಟದಂತೆ ಚಿತ್ತಾಪುರ ತಾಲೂಕಿನ ಕೆಲ ಹಳ್ಳಿಗಳನ್ನು ಶಹಾಬಾದ್, ಕಾಳಗಿಗೆ ಸೇರಿಸುತ್ತಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ. ಗ್ರಾಮಗಳ ಜನರ ಅಭಿಪ್ರಾಯ, ನಿಯಮಗಳ ಪ್ರಕಾರ ಹಳ್ಳಿಗಳನ್ನು ಹಂಚಿಕೆ ಮಾಡಬೇಕು. ಕೆಲವರು ತಮ್ಮ ಪ್ರತಿಷ್ಟೆಗಾಗಿ ಬೇಕಾಬಿಟ್ಟಿ ಹಳ್ಳಿಗಳು ಹಂಚುತ್ತಿದ್ದಾರೆ. ಇದಕ್ಕೆ ನಾನು ಒಪ್ಪುವುದಿಲ್ಲ. ಸಿಎಂ, ರಾಷ್ಟ್ರಪತಿ ಪ್ರಭಾವ ಬಂದರೂ ನಾನು ಅವಕಾಶ ನೀಡುವುದಿಲ್ಲ. ಜನರೊಂದಿಗೆ ಬೆರೆತು ಹೋರಾಟ ಮಾಡುತ್ತೇನೆ.
| ಪ್ರಿಯಾಂಕ್ ಖರ್ಗೆ , ಶಾಸಕ