ನರಗುಂದ: ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಕೋವಿಡ್-19 ವೈರಸ್ ನಿಯಂತ್ರಿಸುವಲ್ಲಿ ಸಂಪೂರ್ಣ ನಿಷ್ಕ್ರಿಯಗೊಂಡಿವೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದು, ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿವೆ. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕರು ಬಿಜೆಪಿ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.
ನರಗುಂದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಡಿ.ಕೆ. ಶಿವಕುಮಾರ ಹಾಗೂ ಮೂವರು ಕಾರ್ಯಾಧ್ಯಕ್ಷರ ಪದಗ್ರಹಣದ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ಕರೊನಾ ಸೋಂಕಿತರಿಗೆ ಬಿಜೆಪಿ ಸರ್ಕಾರ ಸರಿಯಾದ ಬೆಡ್ ಮತ್ತು ಆಹಾರದ ವ್ಯವಸ್ಥೆ ಮಾಡುತ್ತಿಲ್ಲ. ಅಗತ್ಯ ಇಲ್ಲದಾಗ ಲಾಕ್ಡೌನ್ ಮಾಡಿದ್ದರು. ಇದೀಗ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಆಡಳಿತ ಪಕ್ಷದ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ, ನರಗುಂದ ಬ್ಲಾಕ್ ವೀಕ್ಷಕ ಸಂಗಮೇಶ ಬಬಲೇಶ್ವರ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಟ್ಟಣದ 23 ವಾರ್ಡ್ಗಳು ಹಾಗೂ ಮತಕ್ಷೇತ್ರದಾದ್ಯಂತ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 1100 ಕೋಟಿ ರೂ.ಗಳ ವೆಚ್ಚದಲ್ಲಿ ನೀರಾವರಿ ಕಾಲುವೆಗಳನ್ನು ನವೀಕರಣಗೊಳಿಸಿದ್ದಾರೆ ಎಂದರು. ಪಂಚಾಯಿತಿಯಿಂದ ವಿಧಾನಸೌಧದವರೆಗೂ ಸೌಹಾರ್ದ ಸಾರುವ ಕಾಂಗ್ರೆಸ್ ಪಕ್ಷವು ಜನರ ಆಶೋತ್ತರಗಳಿಗೆ ಸ್ಪಂದಿಸುವ ಏಕೈಕ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಹೊಸ ಶಕೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಎಸ್.ಡಿ. ಕೊಳ್ಳಿಯವರ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜು ಕಲಾಲ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಉದಯಗೌಡ ವೀರನಗೌಡ್ರ, ಪ್ರಕಾಶ ಹಡಗಲಿ, ವಿಷ್ಣು ಸಾಠೆ, ರಾಜು ಮುಳಿಕ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಐ.ಪಿ. ಚಂದೂನವರ, ವಿಠ್ಠಲ ಶಿಂಧೆ, ಎಂ.ಬಿ. ಅರಹುಣಸಿ, ವಿ.ಎನ್. ಕೊಳ್ಳಿಯವರ, ವೆಂಕಟೇಶ ಮೇಟಿ, ಪುರಸಭೆ ಸದಸ್ಯೆ ರಾಜೇಶ್ವರಿ ವೀರನಗೌಡ್ರ, ಉಮಾ ದ್ಯಾವನೂರ, ಗುರುಪಾದಪ್ಪ ಕುರಹಟ್ಟಿ, ಮೌಲಾಸಾಬ್ ಅರಬಜಮಾದಾರ, ಭರತರಡ್ಡಿ ಭೀಮರಡ್ಡಿಯವರ, ನವೀನ ಗೋವೇಶ್ವರ, ಕಿರಣ ಹಡಗಲಿ, ಮುತ್ತು ತೋರಗಲ್ಲ್ಲ ಮಹೇಶ ಬಡಿಗೇರ, ಸಿ.ಎಚ್. ಕೋರಿ, ಶಂಕ್ರಣ್ಣ ವಾಳದ, ಚನ್ನಬಸಪ್ಪ ಕಂಠಿ, ಇತರರಿದ್ದರು.