ಜಿಲ್ಲೆ

ಕರೊನಾ ನಿಯಂತ್ರಿಸುವಲ್ಲಿ ಕೇಂದ್ರ ವಿಫಲ

ಬಾಗೇಪಲ್ಲಿ : ಕರೊನಾ ತಡೆಗಟ್ಟಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಐ(ಎಂ) ಪಕ್ಷದ ಆಶ್ರಯದಲ್ಲಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ ಮಾತನಾಡಿ, ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಏರಿಕೆಯಾಗುತ್ತಾ ಸುಮಾರು 3ಲಕ್ಷ ಸಮೀಪಿಸುತ್ತಿದೆ ಹಾಗೂ 7ಸಾವಿರ ಸೋಂಕಿತರು ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಕಾರ್ಮಿಕರು ಯಾವುದೇ ಆದಾಯವಿಲ್ಲದೆ ಬೀದಿಪಾಲಾಗಿದ್ದಾರೆ. ಅನ್ಯ ರಾಜ್ಯದಲ್ಲಿದ್ದ ಶ್ರಮಿಕರು ಕಾಲ್ನಡಿಗೆಯಲ್ಲೇ ಮಡದಿ ಮಕ್ಕಳೊಂದಿಗೆ ಉರಿ ಬಿಸಿನಲ್ಲಿ ಪ್ರಯಾಣಿಸಿದ್ದಾರೆ. ಅನೇಕ ಶ್ರಮಿಕರು ದಾರಿ ಮಧ್ಯೆದಲ್ಲಿಯೇ ಮೃತಪಟ್ಟ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.

ಕೇರಳ ರಾಜ್ಯ ಕರೊನಾ ತಡೆಯುವಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ರಾಜ್ಯ ಸರ್ಕಾರ ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಕೆಲವು ಅಸಂಘಟಿತರಿಗೆ ಪರಿಹಾರ ನೀಡುವ 2222ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿದೆ. ಇದನ್ನು ಸಹ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಉಳಿದವರಿಗೆ ಪರಿಹಾರ ನೀಡಲು ಹಣವಿಲ್ಲ ಎಂಬ ಸಬೂಬು ಹೇಳುತ್ತಿದೆ ಎಂದು ದೂರಿದರು. ತಹಸೀಲ್ದಾರ್ ಎಂ.ನಾಗರಾಜ್‌ಗೆ ಮನವಿ ಸಲ್ಲಿಸಲಾಯಿತು. ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಸಿಪಿಎಂ ನಗರ ಘಟಕ ಅಧ್ಯಕ್ಷ ಅಶ್ವತ್ಥಪ್ಪ ಹಾಗೂ ಮುಖಂಡರಾದ ಮಹಮದ್ ಆಕ್ರಂ, ನರಸಿಂಹರೆಡ್ಡಿ, ರಫೀಕ್, ಸಾಧೀಕ್, ನಾರಾಯಣಸ್ವಾಮಿ ಇತರರಿದ್ದರು.