ಬೀದರ್: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್-19 ಜಾಗೃತಿ ಕುರಿತಂತೆ ಪ್ರಚಾರ ಕಾರ್ಯ ನಡೆಸಲಿರುವ ಬೃಹತ್ ಎಲ್ಇಡಿ ಪರದೆ ಹೊಂದಿರುವ ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಶನಿವಾರ ಔರಾದ್ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಇನ್ನೂ ಕರೊನಾ ಸಂಕಷ್ಟ ಮುಗಿದಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡುಸುತ್ತಿದ್ದರು ಜನ ಮಾಸ್ಕ್ ಧರಿಸುತ್ತಿಲ್ಲ. ಪರಸ್ಪರ ಅಂತರ ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಲು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಆಯ್ದ ಹಳ್ಳಿಗಳಲ್ಲಿ ಬೃಹತ್ ಎಲ್ಇಡಿ ಪರದೆ ಹೊಂದಿದ ಈ ವಾಹನಗಳು ಸಂಚರಿಸಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ವಾಹನವು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಸಂಬಂಧಿಸಿದ ಗ್ರಾಪಂ ಪಿಡಿಒ ಈ ಬಗ್ಗೆ ಗಮನ ಹರಿಸಿ, ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಕರೊನಾ ಹಿನ್ನೆಲೆಯಲಿ ಮುಂಜಾಗ್ರತೆ ಜಾಗೃತಿ ಸಂದೇಶ ನೀಡಲು ದಿನಕ್ಕೆ 5 ಗ್ರಾಮಗಳಂತೆ ಜಿಲ್ಲೆಯ 180 ಗ್ರಾಮಗಳಲ್ಲಿ ವಾಹನ ಸಂಚರಿಸಲಿದೆ. ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತೀ ಅವಶ್ಯವಿದೆ ಎಂದು ಹೇಳಿದರು.
ಜಿಪಂ ಸದಸ್ಯ ಮಾರುತಿ ಚವ್ಹಾಣ್, ಮುಖಂಡರಾದ ಸಚಿನ್, ಬಸವರಾಜ ಸ್ವಾಮಿ, ಚಂದ್ರಕಾಂತ ಪಾಂಚಾಳ, ಮಾರುತಿ ಗುಳೆ, ಸಂಜೀವ ಪಾಂಚಾಳ ಇತರರಿದ್ದರು.
ಶನಿವಾರ ಬೀದರ್ ತಾಲೂಕಿನ ಅಷ್ಟೂರ, ಮಾಳೆಗಾಂವ್, ಚಿಲ್ಲರ್ಗಿ, ಚೀಮಕೋಡ್ ಮತ್ತು ಗಾದಗಿ ಮತ್ತು ಔರಾದ್ ತಾಲೂಕಿನ ಸಂಗಮ, ಬಳತ್(ಬಿ), ಬಳತ್ (ಕೆ), ಚಾಂದೋರಿ ಮತ್ತು ಹಾಲಹಳ್ಳಿ ಗ್ರಾಮಗಳಲ್ಲಿ ಸಂಚಾರ ನಡೆಸಿ, ಜನಜಾಗೃತಿ ಮೂಡಿಸಿದವು. ಭಾನುವಾರ ತಾಲೂಕಿನ ಚಿಕ್ಕಪೇಟ, ಮರಕಲ್, ಜನವಾಡ, ಚಾಂಬೋಳ, ಅಲಿಯಂಬರ್ ಹಾಗೂ ಔರಾದ್ ತಾಲೂಕಿನ ಠಾಣಾಕುಶನೂರ, ನಿಡೋದಾ, ರಕ್ಷಾಳ (ಬಿ), ರಕ್ಷಾಳ (ಕೆ) ಮತ್ತು ಹೆಡಗಾಪುರ ಗ್ರಾಮಗಳಲ್ಲಿ ಜಾಗೃತಿ ಜಾಥಾ ನಡೆಯಲಿದೆ.