ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರೊನಾ ಕೈ ಮೀರುತ್ತಿರುವುದನ್ನು ಅರಿತ ಜಿಲ್ಲಾಡಳಿತ ಟಾಸ್ಕ್‌ಫೋರ್ಸ್ ಕಮಿಟಿಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದೆ.
ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿ, ಪಿಡಿಒ ಮತ್ತು ಕಾರ್ಯದರ್ಶಿಗಳನ್ನೊಳಗೊಂಡ ಟಾಸ್ಕ್‌ಫೋರ್ಸ್ ಕಮಿಟಿ ರಚಿಸಲಾಗಿದೆ. ಹಾಗೆಯೇ ನಗರ, ಪಟ್ಟಣ ಪ್ರದೇಶಗಳಲ್ಲೂ ಪೌರಾಯುಕ್ತರ ನೇತೃತ್ವದಲ್ಲಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.
ಆರಂಭದಲ್ಲಿ ಜನರಲ್ಲಿ ಮುಂಜಾಗ್ರತಾ ಕ್ರಮಗಳ ಪಾಲನೆಯ ಅರಿವು ಮೂಡಿಸಲು ಸೀಮಿತವಾಗಿತ್ತು, ನಿಯಮ ಉಲ್ಲಂಸುವವರಿಗೆ ನಿರ್ಲಕ್ಷ್ಯ ವಹಿಸದಂತೆ ಮನವೊಲಿಸುತ್ತಿತ್ತು, ಆದರೆ ಈಗ ಎಲ್ಲೆಡೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದಂಡ ವಿಧಿಸುವಿಕೆ, ಅಂಗಡಿಗಳ ಪರವಾನಿಗೆ ರದ್ದು ಸೇರಿ ದಂಡಂ ದಶಗುಣಂ ನೀತಿ ಅನುಸರಿಸಲಾಗುತ್ತಿದೆ.
ಎಸಿ ನೇತೃತ್ವದಲ್ಲಿ ಕಾರ್ಯಾಚರಣೆ: ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಸ್ಥಳ ಪರಿಶೀಲಿಸಿ, ನಿಗಾ ವಹಿಸುತ್ತಿದ್ದಾರೆ. ಉಪ ವಿಭಾಗಾಧಿಕಾರಿ ಎ.ರಘುನಂದನ್ ನೇತೃತ್ವದ ತಂಡ ಶನಿವಾರ ಜಿಲ್ಲಾಕೇಂದ್ರದಲ್ಲಿ ವಿವಿಧೆಡೆ ತೆರಳಿ, ನಿರ್ಲಕ್ಷ್ಯ ತೋರುತ್ತಿರುವವರಿಗೆ ದಂಡ ವಿಧಿಸಿದೆ. ಅಂಗಡಿಗಳನ್ನು ಬಾಗಿಲು ಮುಚ್ಚಿಸಿದೆ.
ಖುದ್ದು ಡಿಸಿ, ಸಿಇಒ, ಎಸ್ಪಿ ಭೇಟಿ: ಮತ್ತೊಂದೆಡೆ ಸೀಲ್‌ಡೌನ್ ಪ್ರದೇಶಗಳಿಗೆ ಖುದ್ದು ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಸ್ವಚ್ಛತೆ ನಿರ್ವಹಣೆ ಮತ್ತು ಹೋಮ್ ಕ್ವಾರಂಟೈನ್ ವ್ಯವಸ್ಥೆ, ಜನರ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಜತೆಗೆ ಟಾಸ್ಕ್‌ಫೋರ್ಸ್ ಕಮಿಟಿಯ ಕಾರ್ಯನಿರ್ವಹಣೆ ವೈಖರಿ, ಪ್ರಗತಿ ಸೇರಿ ಇತರ ಮಾಹಿತಿಯನ್ನು ನಿತ್ಯ ಡಿಸಿ ಪಡೆದುಕೊಳ್ಳುತ್ತಿದ್ದಾರೆ.
ಹಲವೆಡೆ ಲಾಕ್‌ಡೌನ್: ಜಾಗೃತಿ ಕಾರ್ಯಕ್ರಮದ ನಡುವೆ ಪ್ರಕರಣಗಳ ಹೆಚ್ಚುತ್ತಿರುವುದರಿಂದ ಜನರು ಈಗ ಎಚ್ಚೆತ್ತುಕೊಂಡಿದ್ದಾರೆ. ಗ್ರಾಮೀಣ ಪ್ರದೇಶ ಸೇರಿ ಜಿಲ್ಲೆಯ ಬಹುತೇಕ ಕಡೆ ಅಫ್ ಲಾಕ್‌ಡೌನ್ ಅನಧಿಕೃತವಾಗಿ ಜಾರಿಯಲ್ಲಿದೆ. ಹೆಚ್ಚಿನ ಜನರು ಸೇರುವ ಮಾರುಕಟ್ಟೆ, ಕಟ್ಟಡ ನಿರ್ಮಾಣ, ಹೋಟೆಲ್ ಸೇರಿ ವಿವಿಧೆಡೆ ಸಾಮಾನ್ಯವಾಗಿ ನಿಯಮಗಳನ್ನು ಉಲ್ಲಂಘಿಸುವ ದೃಶ್ಯಗಳು ಕಂಡು ಬಂದರೂ ಇತರೆಡೆ ಮಾತ್ರ ಸ್ವಯಂಪ್ರೇರಣೆಯಿಂದ ಜನರು ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಸ್ವಯಂಪ್ರೇರಣೆಯಿಂದ ಜನರು ಸಹ ಸಹಕಾರ ನೀಡಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಮಂಜುನಾಥ್, ಉಪನ್ಯಾಸಕರು, ಚಿಕ್ಕಬಳ್ಳಾಪುರ