ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ. ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಡಾ.ರಾಜೇಂದ್ರ, ಜಿಲ್ಲೆಯಲ್ಲಿ ಕರೊನಾ ಕಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಹೀಗಾಗಿ ಜಿಲ್ಲೆಯ ಅಧಿಕಾರಿ ತಂಡದ ಜತೆಗೆ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಸೋಂಕು ನಿಯಂತ್ರಣಕ್ಕೆ ವಿವಿಧ ಕ್ರಮಗಳನ್ನು ಕೂಡ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಹೀಗಾಗಿ, ಕರೊನಾ ನಿಯಂತ್ರಣವೇ ನಮ್ಮ ಮುಂದಿರುವ ಬಹು ದೊಡ್ಡ ಸವಾಲು ಎಂದರು.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಹಿನ್ನೆಲೆಯಲ್ಲಿ ಇಲ್ಲಿನ ಒಟ್ಟು ಚಿತ್ರಣ ಗಮನಿಸಿದ್ದೇನೆ. ಕರೊನಾ ಅಲ್ಲದೆ ಇಲ್ಲಿನ ಇತರ ವಿಚಾರಗಳ ಬಗ್ಗೆಯೂ ಹಂತ ಹಂತವಾಗಿ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಡಾ.ರಾಜೇಂದ್ರ ಅವರು ದ.ಕ. ಜಿಲ್ಲೆಯ 130ನೇ ಜಿಲ್ಲಾಧಿಕಾರಿ.