ಕೋಲಾರ : ಕರೊನಾದಿಂದ ಬಳಲುತ್ತಿರುವ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ಉದ್ದೇಶದಿಂದ ಬಿಇಎಂಎಲ್ ಕೆಜಿಎಫ್‌ನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಹೇಳಿದರು.
ಕರೊನಾ 2ನೇ ಅಲೆ ನಿಯಂತ್ರಿಸುವ ಸಂಬಂಧ ಬುಧವಾರ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯನ್ನು ಕರೊನಾದಿಂದ ಪಾರು ಮಾಡಲು ಸಂಸದರು, ಶಾಸಕರು ನೀಡಿರುವ ಸಲಹೆಗಳನ್ನು ಪಾಲಿಸಲು ನಿರ್ಧರಿಸಲಾಗಿದೆ ಎಂದರು.
ಬಿಇಎಂಎಲ್ ಸಾಮಾಜಿಕ ಬದ್ಧತೆಯಡಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಸಮ್ಮತಿಸಿದೆ, ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಟಕ ಸ್ಥಾಪಿಸಲು ರಾಜ್ಯ ಸರ್ಕಾರ ಪರವಾನಗಿ ನೀಡುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಆಗುವ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾದ್ಯಂತ ಅನುಷ್ಠಾನಕ್ಕೆ ತರಲು ಸಭೆಯಲ್ಲಿ ತೀರ್ವಾನಿಸಲಾಗಿದೆ, ಕಲ್ಯಾಣ ಮಂಟಪಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವುದು, ಗಡಿಭಾಗದಲ್ಲಿ ತಪಾಸಣೆ ಹೆಚ್ಚಳ, ಹೊರ ರಾಜ್ಯದಿಂದ ಬರುವ ಜನರ ಮೇಲೆ ನಿಗಾವಹಿಸಿವುದು ಹಾಗೂ ವಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯಗೊಳಿಸುವುದಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೆ ಕೊರತೆ ಉಂಟಾಗದಂತೆ ಎಚ್ಚರ ವಹಿಸಲಾಗಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಬೆಡ್‌ಗಳನ್ನು ಸರ್ಕಾರಕ್ಕೆ ಮೀಸಲಿಡಲು ಆದೇಶಿಸಲಾಗಿದೆ, ಜಿಲ್ಲೆಯ 6 ತಾಲೂಕುಗಳಲ್ಲಿ ಕನಿಷ್ಠ 1 ಅಥವಾ 2 ಕೋವಿಡ್ ಕೇರ್ ಸೆಂಟರ್ ತೆರೆಯಲು ಜನಪ್ರತಿನಿಧಿಗಳಿಂದ ಸಲಹೆ ಕೇಳಿ ಬಂದಿದ್ದು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೋಂಕಿತರು ವೆಂಟಿಲೇಟರ್, ಐಸಿಯು ಕೊರತೆಯಿಂದ ಸಾವು ನೋವು ಅನುಭವಿಸುವುದನ್ನು ತಡೆಯುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಪ್ರಸ್ತುತ ಜಿಲ್ಲೆಯಲ್ಲಿ ಇದಕ್ಕೆ ಕೊರತೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಉದ್ದೇಶಪೂರ್ವಕವಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ರೆಮ್‌ಡಿಸಿವಿರ್ ಔಷಧ ನಮ್ಮಲ್ಲಿ ಪ್ರಸ್ತುತ 450 ಡೋಸ್ ದಾಸ್ತಾನಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಲಸಿಕೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ 50 ಸರ್ಕಾರಿ ಆಂಬುಲೆನ್ಸ್‌ಗಳಿದ್ದು ಸಕಾಲಕ್ಕೆ ಬಳಕೆ ಆಗುವಂತೆ ನೋಡಿಕೊಳ್ಳಲಾಗುವುದು, ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಲ್ಲಿ ತಕ್ಷಣ ದುರಸ್ತಿ ಮಾಡಿಸಲು ಹಾಗೂ ಚಾಲಕ ಮತ್ತು ಸಿಬ್ಬಂದಿ ಕೊರತೆ ಇಲ್ಲದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಲಸಿಕೆಯನ್ನು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ನೀಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಇದರ ಜತೆಗೆ ಲಸಿಕೆ ನೀಡುವುದನ್ನು ವಿಕೇಂದ್ರೀಕರಣಗೊಳಿಸಲು ಶಾಸಕರು ನೀಡಿರುವ ಸಲಹೆ ಪರಿಗಣಿಸಲಾಗುವುದು ಎಂದರು. ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಎಚ್.ನಾಗೇಶ್, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ, ಎಂಎಲ್‌ಸಿ ಇಂಚರ ಗೋವಿಂದರಾಜು, ಕೋಲಾರ ಎಸ್ಪಿ ಕಾರ್ತಿಕರೆಡ್ಡಿ, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ಕೋಲಾರ ಜಿಪಂ ಸಿಇಒ ಎನ್.ಎಂ.ನಾಗರಾಜ್, ಎಸಿ ಸೋಮಶೇಖರ್, ಎಡಿಸಿ ಡಾ.ಸ್ನೇಹಾ, ಕೋಲಾರ ತಹಸೀಲ್ದಾರ್ ಶೋಭಿತಾ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಡಾ.ಜಗದೀಶ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಹಾಜರಿದ್ದರು.
ಕರೊನಾ ಧರ್ಮಕ್ಕೆ ಸೀಮಿತವಲ್ಲ: ಕಳೆದ ವರ್ಷ ನಾನು ಮಾಸ್ಕ್ ಧರಿಸದೆ ಓಡಾಡಿದ್ದೇನೆ, ಈ ಬಾರಿ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಭಯಪಟ್ಟು ಮಾಸ್ಕ್ ಧರಿಸುವಂತಾಗಿದೆ, ಒಂದು ಪಾರ್ಟಿ, ಒಂದು ಧರ್ಮಕ್ಕೆ ಕರೊನಾ ಸೀಮಿತವಲ್ಲ, ರಾಷ್ಟ್ರಪತಿಗಳು ಸಭೆ ನಡೆಸಿ ನೀಡಿರುವ ಸೂಚನೆ ಪಾಲಿಸಬೇಕು, ಸರ್ಕಾರದೊಂದಿಗೆ ಸಹಕಾರ ನೀಡಬೇಕು, ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವ ಸೂಚಿಸಬೇಕೆಂಬ ನಿಯಮವಿದೆ, ಆದರೆ ಕಾಲು ಚಾಚಿ ಮಲಗುವೆ ಎನ್ನುವ ಜನರಿದ್ದಾರೆ ಎಂದು ಕಂಟೇನ್ಮೆಂಟ್ ರೆನ್‌ಗಳಲ್ಲಿ ಜನ ರಾಜಾರೋಷವಾಗಿ ಓಡಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಸೂಚ್ಯವಾಗಿ ಪ್ರತಿಕ್ರಿಯಿಸಿದರು.