ಹುಬ್ಬಳ್ಳಿ: ಒಂದು ಕಡೆ ನಗರದಲ್ಲಿ ಕರೊನಾ ಆರ್ಭಟ. ಇನ್ನೊಂದೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಶ್ವಾಪುರದ ಬೆಂಗೇರಿ ಸಂತೆ ಮಾರುಕಟ್ಟೆ ಮರು ನಿರ್ವಣ. ಇವೆರಡರ ನಡುವೆಯೂ ಬೆಂಗೇರಿ ಶನಿವಾರ ಸಂತೆ ಅಬಾಧಿತ.
ಕರೊನಾ ಲಾಕ್ಡೌನ್ನಲ್ಲಿ ಸಡಿಲಿಕೆ ನೀಡಿದರೂ ಸಂತೆ, ಜಾತ್ರೆ ನಡೆಸಲು ಈಗಲೂ ಅವಕಾಶವಿಲ್ಲ. ಕೇಶ್ವಾಪುರ ಬೆಂಗೇರಿ ಮುಖ್ಯ ರಸ್ತೆಯಲ್ಲಿ ನೂರಾರು ಜನ ಕಾಯಿಪಲ್ಲೆ ಮಾರಾಟಗಾರರು ಹತ್ತಿರ ಹತ್ತಿರ ಕುಳಿತುಕೊಂಡು ವ್ಯಾಪಾರ ನಡೆಸಿದರು. ಜನರು ಸಹ ಗುಂಪು ಸೇರಿ ಖರೀದಿ ಮಾಡಿದ್ದು ಶನಿವಾರ ಕಂಡು ಬಂದಿತು.
ಅಧಿಕಾರಿಗಳ ಲೆಕ್ಕದಲ್ಲಿ ಇದು ಅಧಿಕೃತ ಸಂತೆಯಲ್ಲ. ಯಾಕೆಂದರೆ, ನಿಗದಿತ ಸ್ಥಳ (ಬೆಂಗೇರಿ ಸಂತೆ ಮೈದಾನ)ದಲ್ಲಿ ತರಕಾರಿ, ಹೂವು ಹಣ್ಣು ಮಾರಾಟ ನಡೆಯುತ್ತಿಲ್ಲ. ಬದಲಾದ ಸ್ಥಳದಲ್ಲಿ ನಡೆಯುತ್ತಿದೆ. ಈಗ ಬೆಂಗೇರಿ ಸಂತೆ ಮೈದಾನದಲ್ಲಿ ಶನಿವಾರ ಸಂತೆ ನಡೆಸಲು ಸಾಧ್ಯವಿಲ್ಲ. ಕಾರಣ, ಅಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸದಾಗಿ ಸಂತೆ ಮಾರುಕಟ್ಟೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಾಗಾಗಿ ಎದುರಿನ ರಸ್ತೆ, ಅಡ್ಡ ರಸ್ತೆಗಳಲ್ಲಿ ವ್ಯಾಪಾರ ಜೋರಾಗಿ ನಡೆದಿತ್ತು. ತರಕಾರಿ ಮಾರಾಟಗಾರರು ಹಾಗೂ ಜನರಿಂದ ಸುತ್ತಮುತ್ತಲಿನ ಪರಿಸರ ಗಿಜಿಗುಡುತ್ತಿತ್ತು. ಆಗಾಗ ಟ್ರಾಫಿಕ್ ಜಾಮ್ ಪಕ್ಕಾ ಸಂತೆಯ ವಾತಾವರಣ. ಸ್ಥಳ ಮಾತ್ರ ಬದಲು, ಸಂತೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಕಾಣಿಸುತ್ತಿರಲಿಲ್ಲ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಂತೆ ರದ್ದು ಪಡಿಸಿದ ಮೇಲೆ ವಿವಿಧ ಬಡಾವಣೆಗಳಲ್ಲಿ ರಸ್ತೆಯ ಮೇಲೆ ತರಕಾರಿ ಮಾರಾಟಗಾರರು ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವುದು ಕಾಣಸಿಗುತ್ತದೆ. ಆದರೆ, ಇಲ್ಲಿ ಹಾಗೆ ಇರಲಿಲ್ಲ. ಹತ್ತಿರ ಹತ್ತಿರ ಕುಳಿತುಕೊಂಡು ಬಿಂದಾಸ್ ಆಗಿ ಮಾರಾಟ ನಡೆಸಿದ್ದರು.
ಶನಿವಾರ ಮಳೆ ಬಿಡುವು ನೀಡಿದ್ದರಿಂದ ಸಂತೆ ಪೂರ್ಣ ಪ್ರಮಾಣದಲ್ಲಿ ಇತ್ತು. ಆದರೆ, ಕಳೆದ 2-3 ದಿನಗಳಿಂದ ಸುರಿದ ಮಳೆಗೆ ರಸ್ತೆ ಪಕ್ಕದಲ್ಲಿ ನಿಂತ ನೀರಿನಿಂದ ಕೆಸರು ಗದ್ದೆಯಂತಾಗಿದೆ. ಗಲೀಜು, ಕೆಸರು, ಅಸಹ್ಯ ಪರಿಸರದ ನಡುವೆಯೂ ತರಕಾರಿ ಮಾರಾಟ ನಡೆದಿತ್ತು. ಕೆಲವು ತರಕಾರಿ ಮಾರಾಟಗಾರರು ಮಾಸ್ಕ್ ಸಹ ಧರಿಸಿರಲಿಲ್ಲ!
‘ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಬೆಳಗ್ಗೆ ಬಂದು ನೋಡಿಕೊಂಡು ಹೋಗುತ್ತಾರೆ. ದೂರ ದೂರ ಕುಳಿತುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ಮಾರಾಟಗಾರರಿಗೆ ತಿಳಿಹೇಳುತ್ತಾರೆ. ಆದರೆ, ಸಮಯ ಕಳೆದಂತೆ ಸಂತೆ ರಂಗೇರುತ್ತದೆ. ಜನದಟ್ಟಣೆ ಹೆಚ್ಚುತ್ತದೆ. ಸಂಜೆ ವೇಳೆ ನೋಡುವುದೇ ಬೇಡ. ಕಾಲು ಹಾಕಲೂ ಜಾಗ ಇರುವುದಿಲ್ಲ. ಅಧಿಕಾರಿಗಳು ಬರುವುದೇ ಇಲ್ಲ’ ಎಂದು ಸ್ಥಳೀಯ ಅಂಗಡಿಕಾರ ಪ್ರಶಾಂತ ಬಡಿಗೇರ ಹೇಳಿದರು.
‘ಸಂತೆ ನಡೆಸಲು ಅವಕಾಶವಿಲ್ಲ. ಜನದಟ್ಟಣೆಯಾಗದಂತೆ ತರಕಾರಿ ಮಾರಾಟ ನಡೆಸಲು ಹೇಳಿದ್ದೇವೆ. ಬೆಂಗೇರಿಯಲ್ಲಿ ಬೆಳಗ್ಗೆ ರೌಂಡ್ಸ್ ಹೋಗಿ ಪರಿಶೀಲನೆ ನಡೆಸಿದ್ದೆವು. ಸಂಜೆ ಮತ್ತೊಮ್ಮೆ ಹೋಗಿ ನೋಡುತ್ತೇವೆ’ ಎಂದು ಪಾಲಿಕೆ ವಲಯ ಅಧಿಕಾರಿ ವಿಠ್ಠಲ ತುಬಾಕೆ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಸಂಜೆ 7 ಗಂಟೆಯ ವೇಳೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ತರಕಾರಿ ಮಾರಾಟಗಾರರನ್ನು ತೆರವುಗೊಳಿಸಿದ್ದಾರೆ.