ಜಿಲ್ಲೆ

ಕರೊನಾ ನಡುವೆಯೂ ಆರ್ಥಿಕತೆ ಸುಭದ್ರ

ಶಿವಮೊಗ್ಗ: ಕರೊನಾ ಪರಿಣಾಮ ಸೇರಿ ಹಲವು ಆತಂಕಗಳ ನಡುವೆಯೂ ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಸಹಕಾರ ಸಂಘಗಳೇ ಕಾರಣ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್​ಗೌಡ ಹೇಳಿದರು.

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶದ ಆರ್ಥಿಕತೆ ಸಹಕಾರ ಸಂಘಗಳಿಂದ ಸುಗಮವಾಗಿ ಸಾಗುತ್ತಿದೆ. ಆದರೂ ಕೆಲವರು ಸಹಕಾರ ಸಂಘಗಳ ಬಗ್ಗೆಯೇ ದೂರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕರೊನಾ ವೈರಸ್ ಪರಿಣಾಮದಿಂದ ಇಡೀ ವಿಶ್ವದಲ್ಲೇ ಆರ್ಥಿಕ ಹಿಂಜರಿತ ಉಂಟಾಗಿದೆ. ಖಾಸಗಿ ಬ್ಯಾಂಕ್​ಗಳಲ್ಲಿ ಸಾಲ ನೀಡದೆ ಏಪ್ರಿಲ್ ನಂತರ ಬನ್ನಿ ಎನ್ನುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಪ್ರಸಕ್ತ ವರ್ಷ ರೈತರಿಗೆ 200ರಿಂದ 300 ಕೋಟಿ ರೂ. ಹೆಚ್ಚುವರಿ ಸಾಲ ನೀಡುವಷ್ಟು ಸುಭದ್ರವಾಗಿದೆ ಎಂದರು.

ಭದ್ರತೆ ಇಲ್ಲದೆ ಸಾಲ ಇಲ್ಲ: ಯಾವುದೆ ಕಾರಣಕ್ಕೂ ಭದ್ರತೆ ಇಲ್ಲದಿದ್ದರೆ ಸಣ್ಣ ಅಥವಾ ದೊಡ್ಡ ಸಾಲ ನೀಡಬಾರದು. ಇದುವರೆಗೂ ಯೋಜನೆಗಳಿಗೆ ಅನುಗುಣವಾಗಿ ಸಾಲ ನೀಡಲಾಗುತ್ತಿತ್ತು. ಇದರ ಪರಿಣಾಮ ಇಂದು ವಾಣಿಜ್ಯ ಬ್ಯಾಂಕ್​ಗಳು ಸರ್ವನಾಶವಾಗುತ್ತಿವೆ. ಹಾಗಾಗಿ ಸೂಕ್ತ ಭದ್ರತೆಯನ್ನು ಪರಿಶೀಲಿಸಿ ಮರುಪಾವತಿ ಸಾಮರ್ಥ್ಯ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಸಾಲ ನೀಡಬೇಕೆಂದು ಸಲಹೆ ನೀಡಿದರು.

ಎಲ್ಲವೂ ಇನ್ಪೋಸಿಸ್ ಆಗಲು ಸಾಧ್ಯವಿಲ್ಲ. ಬಹಳಷ್ಟು ಪ್ರಾಜೆಕ್ಟ್ (ಯೋಜನೆ)ಗಳು ಚೆನ್ನಾಗಿರುತ್ತವೆ. ಆದರೆ ಹಲವು ಯಶಸ್ವಿ ಆಗುವುದಿಲ್ಲ. ಇದರಿಂದ ಕೊಟ್ಟ ಸಾಲವೂ ಹಿಂದಿರುಗಿಸದೇ ದಿವಾಳಿ ಆಗುತ್ತಾರೆ. ಇಂದು ಸಹಕಾರ ವಲಯದ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ಭದ್ರತೆ ಪರಿಶೀಲಿಸುವುದೊಂದು ಸೂಕ್ತ ಮಾರ್ಗ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಮಾರ್ಚ್ ಅಂತ್ಯಕ್ಕೆ ಬ್ಯಾಲೆನ್ಸ್ ಶೀಟ್ ಸರಿಪಡಿಸಿಕೊಳ್ಳಬೇಕು ಎಂದ ಅವರು, ಜಿಎಸ್​ಟಿ ಪರಿಣಾಮ ಸಹಕಾರ ಸಂಘಗಳ ಮೇಲೂ ಉಂಟಾಗಿದೆ. ಜಿಎಸ್​ಟಿ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಈಗಲೂ ಗೊಂದಲ ನಿವಾರಣೆ ಸಾಧ್ಯವಾಗಿಲ್ಲ ಎಂದರು.

ಇದೇ ವೇಳೆ ಜಿಎಸ್​ಟಿ ತಿದ್ದುಪಡಿ ಕುರಿತು ಲೆಕ್ಕ ಪರಿಶೋಧಕ ಕೆ.ವಿ.ನರೇಂದ್ರ ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಯು.ಸುರೇಶ್ ವಾಟಗೋಡು ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕರಾದ ಡಾ. ಬಿ.ಡಿ.ಭೂಕಾಂತ್, ಪಿ.ವೀರಮ್ಮ, ಸಿ.ಹೊನ್ನಪ್ಪ ಇದ್ದರು.