ಚಿಕ್ಕೋಡಿ: ಕರೊನಾ ಬಗ್ಗೆ ಜನರು ಜಾಗೃತಿ ವಹಿಸದಿದ್ದರೆ ಜೀವಕ್ಕೆ ಕುತ್ತು ತರುತ್ತದೆ ಎಂದು ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಹೇಳಿದರು. ಪುರಸಭೆ ಆವರಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ ಹಾಗೂ ಚಿಕ್ಕೋಡಿ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕರೊನಾ ಜಾಗೃತಿ ಬೀದಿನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಮೈ ಮರೆತು ಎಲ್ಲೆಂದರಲ್ಲಿ ಸಂಚರಿಸಬಾರದು. ಕರೊನಾ ತಡೆಗಟ್ಟುವುದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ. ಕರೊನಾ ತೊಲಗಿಸುವುದಕ್ಕೆ ಎಲ್ಲರೂ ಮುಂಜಾಗ್ರತೆ ವಹಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಮಾತನಾಡಿದರು. ಯುವಧುರೀಣ ಅಜಯ ಕವಟಗಿಮಠ, ಅಮೃತ ಕುಲಕರ್ಣಿ ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ, ಆರೋಗ್ಯ ನಿರೀಕ್ಷಕ ಪಿ.ಕೆ. ಜಮಖಂಡಿ, ಕೆನರಾ ಬ್ಯಾಂಕ್ ಅಮೂಲ್ಯ ಸಾಕ್ಷರತಾ ತಾಲೂಕು ಕೌನ್ಸಿಲರ್ ವಿಜಯ ವಾಘಮಾರೆ ಇದ್ದರು. ಆಶಾದೀಪ ಕಲಾ ತಂಡದವರು ಹಾಡುಗಳ ಮೂಲಕ ಕೊರೊನಾ ಕುರಿತು ಅರಿವು ಮೂಡಿಸಿದರು. ಚಿಕ್ಕೋಡಿ ಪಟ್ಟಣದ ರಾಮನಗರ, ಕರೋಶಿ ಗ್ರಾಮದಲ್ಲಿಯೂ ಕೂಡ ಜಾಗೃತಿಯ ಬೀದಿನಾಟಕ ಪ್ರಸ್ತುತ ಪಡಿಸಿದರು. ಕಲಾ ತಂಡದಲ್ಲಿ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಅಪ್ಪಾಸಾಬ ಚಿಮನೆ, ಮಾರುತಿ ಕಮತೆ, ಸಂತ್ರಾಮ ಮಯೂರ, ಪುಂಡಲೀಕ ನಾಯಿಕ, ಶಂಕರ ಖೋತ, ವಿಷ್ಣು ಹಲಗೇಕರ, ಸಾವಿತ್ರಿ ಹಳಕಲ್ ಇತರರಿದ್ದರು.