ಜಿಲ್ಲೆ

ಕರೊನಾ ತಡೆಗೆ ಆರು ವೈದ್ಯರ ತಂಡ ರಚನೆ

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಮಟ್ಟದಲ್ಲಿ ಆರು ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ. 24 ತಾಸು ವೈದ್ಯಕೀಯ ತಂಡಗಳು ಸೇವೆ ನಿರತವಾಗಿರುತ್ತವೆ. ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕರೊನಾ ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆಗೆ ವಿಶೇಷ ವಾರ್ಡ್​ಗಳನ್ನು ತೆರೆಯಲಾಗಿದೆ. ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿಯ ಜೊತೆಗೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕರೊನಾ ವೈರಸ್ ಗಾಳಿಯಿಂದ ಹರಡುವುದಿಲ್ಲ. ಸೋಂಕಿತ ಮನುಷ್ಯನ ಸಂಪರ್ಕ, ಸೋಂಕಿತ ಬಳಸಿದ ವಸ್ತು, ರ್ಸ³ಸಿದ ಜಾಗದಲ್ಲಿ ತಾವು ಮುಟ್ಟಿದರೆ ಸೋಂಕು ಹರಡುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ನಾವು ಯಾವುದೇ ವಸ್ತುಗಳನ್ನು ಮುಟ್ಟಿದಾಗ ಕೈಗಳನ್ನು ಸೋಪಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಮಾಸ್ಕ್ ಬಳಸುವ ಅಗತ್ಯವಿಲ್ಲ. ಕರೊನಾ ಸೋಂಕಿನ ಲಕ್ಷಣ ಸೀನುವುದು, ಜ್ವರ ಬರುವುದು, ತಲೆನೋವು, ಕೆಮ್ಮು ಬರುತ್ತದೆ. ಇಂತಹ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರ ಕಾಯ್ದುಕೊಳ್ಳಬೇಕು. ಈ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳು ತಕ್ಷಣವೇ ಸಮೀಪದ ಆಸ್ಪತ್ರೆಗಳನ್ನು ಸಂರ್ಪಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ ಪಡೆಯಲು ಹಾಗೂ ವಿದೇಶಿ ಪ್ರವಾಸಿಗರು ಹಾಗೂ ವಿದೇಶದಿಂದ ಮರಳಿ ಬಂದ ಜಿಲ್ಲೆಯ ವ್ಯಕ್ತಿಗಳ ಬಗ್ಗೆ ಗಮನ ಹರಿಸಿ ಕರೊನಾ ಲಕ್ಷಣಗಳಿದ್ದರೆ ಸೂಕ್ತ ಚಿಕಿತ್ಸೆ, ಅವರ ಮೇಲೆ 28 ದಿನಗಳ ಕಾಲ ನಿಗಾ ವಹಿಸಲು ವೈದ್ಯಕೀಯ ತಂಡಗಳಿಗೆ ಸೂಚಿಸಲಾಗಿದೆ. ಮಾಸ್ಕ್, ಲ್ಯಾಬ್ ಟೆಸ್ಟ್​ಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಈಗಾಗಲೇ ಆರೋಗ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾತ್ರೆಗಳು, ಸಂತೆ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರ ಹೆಚ್ಚಿನ ದಟ್ಟಣೆಯಿರುವುದರಿಂದ ಈ ಜಾಗಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಸಂಚಾರಿ ಕೇಂದ್ರ ತೆರೆದು ಕರೊನಾ ಕುರಿತು ಆಡಿಯೋ ಮೂಲಕ ಜಾಗೃತಿ ಮೂಡಿಸಬೇಕು. ಪ್ರಯಾಣಿಕರನ್ನು ಥಮೋ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಬೇಕು. ಅನುಮಾನ ಬಂದರೆ ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆದು ಚಿಕಿತ್ಸೆಗೊಳಪಡಿಸಲಾಗುವುದು. ಮಾ. 23ರಿಂದ ಎಲ್ಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಪರೀಕ್ಷೆ ಮುಗಿಸಿ ಶಾಲೆಗಳಿಗೆ ರಜೆ ಘೊಷಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯೇ ಚಿಕಿತ್ಸೆ

ಕರೊನಾ ವೈರಸ್ ಕುರಿತು ಭಯಪಡಬೇಡಿ, ರೋಗ ಬಾರದ ರೀತಿಯಲ್ಲಿ ಮುನ್ನೆಚರಿಕಾ ಕ್ರಮಗಳನ್ನು ಅನುಸರಿಸಬೇಕು. ಸೋಂಕಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಜ್ವರ, ಕೆಮ್ಮು ನೀಡುವ ಇತರ ಔಷಧಗಳೇ ಇದಕ್ಕೆ ಮದ್ದು. ಇದಕ್ಕಿಂತ ಮಿಗಿಲಾಗಿ ಮುನ್ನೆಚ್ಚರಿಕೆಯ ಕ್ರಮಗಳೇ ಸೂಕ್ತ ಚಿಕಿತ್ಸೆಗಳಾಗಿವೆ. ಹಸ್ತಲಾಘವ ಮಾಡುವುದರ ಬದಲಾಗಿ ಕೈ ಮುಗಿದು ನಮಸ್ಕರಿಸಬೇಕು. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಬಳಸಿಕೊಳ್ಳಬೇಕು. ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಸಮಾರಂಭಗಳು ಹಾಗೂ ಶಿಬಿರಗಳನ್ನು ಆಯೋಜಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದ್ದಾರೆ.