ಜಿಲ್ಲೆ

ಕರೊನಾ ತಡೆಗಿಲ್ಲ ಸಾಮಾಜಿಕ ಅಂತರ

Dharwad

ಉಪ್ಪಿನಬೆಟಗೇರಿ: ಕರೊನಾ ತಡೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದ್ದರೂ ಗ್ರಾಹಕರು ಅದನ್ನು ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತ ದೃಶ್ಯ ಗ್ರಾಮದ ಕೆವಿಜಿ ಬ್ಯಾಂಕ್ ಮುಂದೆ ಗುರುವಾರ ಕಂಡುಬಂತು.

ಗ್ರಾಮದ ಹೊಸ ಬಸ್ ನಿಲ್ದಾಣ ಬಳಿಯ ಡಾ. ಬಿ.ಎಂ. ತೋಟರ್ ಬಿಲ್ಡಿಂಗ್​ನ ಮೊದಲ ಮಹಡಿಯಲ್ಲಿರುವ ಕೆವಿಜಿ ಬ್ಯಾಂಕ್ ಶಾಖೆಯು ಉಪ್ಪಿನಬೆಟಗೇರಿ ಸೇರಿ ಸುತ್ತಲಿನ ಹಳ್ಳಿಗಳ ಸಾವಿರಾರು ಗ್ರಾಹಕರನ್ನು ಹೊಂದಿದೆ. ಗ್ರಾಹಕರು ಸರತಿಗಾಗಿ ಬ್ಯಾಂಕ್ ಕಟ್ಟಡದ ಮೆಟ್ಟಿಲುಗಳನ್ನು ಬಳಸುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ. ನೂರಾರು ಜನ ನಿಲ್ಲುವುದರಿಂದ ಸರದಿ ಸಾಲು ಕಟ್ಟಡದ ಕೆಳಗಿನವರೆಗೆ ಬರುತ್ತಿದೆ. ಹೀಗಾಗಿ ಒಬ್ಬರ ಪಕ್ಕ ಒಬ್ಬರು ನಿಲ್ಲುತ್ತಿದ್ದಾರೆ. ಕೆಲವರಂತೂ ಮಾಸ್ಕ ಧರಿಸಿರುವುದೇ ಇಲ್ಲ. ಇದು ಇತರ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಆದರೆ, ಬ್ಯಾಂಕ್ ಒಳಗಡೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ಮಾಡುತ್ತಿದ್ದಾರೆ.

ಕರೊನಾ ತಡೆಗಟ್ಟಲು ಬ್ಯಾಂಕ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗ್ರಾಹಕರು ಅವರು ಹೋದ ಬಳಿಕ ಯಥಾ ಪ್ರಕಾರ ಅಕ್ಕಪಕ್ಕ ನಿಲ್ಲುತ್ತಾರೆ. ಲಾಕ್​ಡೌನ್ ಮುಗಿಯುವರೆಗೆ ಬ್ಯಾಂಕ್​ನವರು ಒಬ್ಬ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು. ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸರ್ವರ್ ಸಮಸ್ಯೆ: ಉಪ್ಪಿನಬೆಟಗೇರಿ ಕೆವಿಜಿ ಬ್ಯಾಂಕ್ ಶಾಖೆ ಮುಂದೆ ಗುರುವಾರ ಬೆಳಗ್ಗೆಯಿಂದ ಹಣಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರಿಗೆ ಸರ್ವರ್ ಸಮಸ್ಯೆ ಉಂಟಾಯಿತು. ಇದರಿಂದ ಗ್ರಾಹಕರು ಮನೆಗೆ ಮರಳುವ ಪರಿಸ್ಥಿತಿ ಬಂದಿತು.

ಲಾಕ್​ಡೌನ್ ಪಾಲನೆಯಿಂದ ಕರೊನಾ ವೈರಸ್ ನಿಯಂತ್ರಣ: ಪ್ರಪಂಚದಾದ್ಯಂತ ಕರೊನಾ ವೈರಸ್ ಹರಡುತ್ತಿರುವುದರಿಂದ ಕೇಂದ್ರ ಸರ್ಕಾರ ಘೊಷಿಸಿರುವ ಲಾಕ್​ಡೌನ್ ಅನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕುಂದಗೋಳ ತಾಲೂಕಿನ ಮುಳ್ಳೊಳ್ಳಿ ಗ್ರಾಮದ ವಿರಕ್ತಮಠದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು. ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಆಚೆಗೆ ಬರಬೇಕು. ಅನವಶ್ಯಕವಾಗಿ ಬೀದಿಯಲ್ಲಿ ಸುತ್ತಾಡುವುದರಿಂದ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದು ಬಹಳ ಕಷ್ಟವಾಗುತ್ತದೆ. ಲಾಕ್​ಡೌನ್​ನಿಂದ ಮಾತ್ರ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ನಾವೆಲ್ಲರೂ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಪಾಲಿಸಿ ಈ ರೋಗದಿಂದ ಮುಕ್ತರಾಗೋಣ ಎಂದು ತಿಳಿಸಿದ್ದಾರೆ.