ಗೌರಿಬಿದನೂರು : ಪರಸ್ಪರ ಅಂತರ ಕಾಪಾಡುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ಕರೊನಾ ಹರಡದಂತೆ ತಡೆಯಬಹುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾದೇವಿದಾಸ್ ರಾಯ್ಕರ್ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿಕ್ಕಬಳ್ಳಾಪುರ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಅರೋಗ್ಯ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೋವಿಡ್-19 ಪ್ರಚಾರ ಆಂದೋಲನ ಸುರಕ್ಷಿತವಾಗಿರಿ ಮತ್ತು ಇತರರನ್ನೂ ಸುರಕ್ಷಿತವಾಗಿರಿಸಿ ಜಾಥಾದಲ್ಲಿ ಮಾತನಾಡಿದರು.
ಎಂಟು ತಿಂಗಳಿನಿಂದ ವಿಶ್ವವನ್ನೇ ತಲ್ಲಣಗೊಳಿಸಿರುವ ಸೋಂಕು ಕಡಿವಾಣಕ್ಕೆ ಎಲ್ಲರೂ ಮುಂದಾಗಬೇಕು, ಸರ್ಕಾರ ನೀಡಿರುವ ಆರೋಗ್ಯ ಪಾಲನೆ ನಿಯಮಗಳನ್ನೂ ಕಡ್ಡಾಯವಾಗಿ ಪಾಲನೆ ಮಾಡಬೇಕು, ಮಾರ್ಕೆಟ್ ಸೇರಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ದಂಡ ವಿಧಿಸುವುದರೊಂದಿಗೆ ಅರಿವು ಮೂಡಿಸಬೇಕು ಎಂದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಯಾವುದೇ ಕಾರಣಕ್ಕು ಹೆಚ್ಚು ಜನರಿಗೆ ಪ್ರಯಾಣಕ್ಕೆ ಅನುವು ಮಾಡಿಕೊಡಬಾರದು ಮತ್ತು ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಬೇಕು ಎಂದು ಚಾಲಕ ಮತ್ತು ನಿರ್ವಾಹಕರಿಕರಿಗೆ ಸೂಚನೆ ನೀಡಿದರು. ’
ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಗಂಗಯ್ಯಮಾತನಾಡಿ, ಜ್ವರ ಅಥವಾ ಕೆಮ್ಮು ಕಂಡು ಬಂದಲ್ಲಿ ವೈದ್ಯರಿಗೆ ತಿಳಿಸಿ ಮತ್ತು ರೋಗದ ಲಕ್ಷಣಗಳು ಕಂಡುಬಂದಲ್ಲಿ ಸಹಾವಾಣಿ 104ಮತ್ತು (011-23978046) ಕರೆ ಮಾಡಿ ಎಂದು ತಿಳಿಸಿದರು.
ಮಾಸ್ಕ್ ಧರಿಸದೆ ಇರುವವರೆಗೆ ಪಿಎಸ್ಸೈ ಚಂದ್ರಕಲಾ ದಂಡ ವಿಧಿಸಿ, ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು.
ವಕೀಲರ ಸಂಘದ ಕಾರ್ಯದರ್ಶಿ ಬಿ.ಲಿಂಗಪ್ಪ, ಉಪಾಧ್ಯಕ್ಷ ಧನಂಜಯ್ ವಕೀಲರಾದ ವಿ.ಗೋಪಾಲ್, ನಾಗರಾಜು, ದಿನೇಶ್‌ಕುಮಾರ್, ಆದಿನಾರಾಯಣಗೌಡ, ವೇಣುಗೋಪಾಲ್, ಕೆ,ಲಕ್ಷ್ಮೀನಾರಾಯಣ್ ಎಚ್.ಎಲ್.ವೆಂಕಟೇಶ್, ಕೋಮಲ, ನ್ಯಾಯಾಲಯದ ಸಿಬ್ಬಂದಿ ಸಂಧ್ಯಾ ಇದ್ದರು.