ಜಿಲ್ಲೆ

ಕರೊನಾ ಜಾಗೃತಿಗೆ ಉಚಿತ ಮಾಸ್ಕ್ ವಿತರಣೆ; ಬ್ಯಾಂಕ್‌ನ ಗ್ರಾಹಕರಿಗೆ ಕರೊನಾ ಬಗ್ಗೆ ಜಾಗೃತಿ

ಪ್ರದೀಪ್ ಕುಮಾರ್.ಆರ್.ದೊಡ್ಡಬಳ್ಳಾಪುರ: ಲಾಕ್ ಡೌನ್ ಹಿನ್ನಲೆ ಬಹುತೇಕರು ಮನೆಯಲ್ಲಿದ್ದರೆ, ಕೆಲವರು ಕರೊನಾ ಸೋಂಕು ತಡೆಗೆ ತೊಡಗಿಸಿಕೊಂಡಿರುವುದು ನೋಡಬಹುದು. ಇಂಥವರಲ್ಲಿ ತಾಲೂಕಿನ ಅರಳು ಮಲ್ಲಿಗೆ ಗ್ರಾಮ ಪಂಚಾಯಿತಿ ಹಾಲಹಳ್ಳಿಯ ಕೆನರಾ ಬ್ಯಾಂಕ್ ನಲ್ಲಿ ಬೀಸಿ(ಬ್ಯಾಂಕಿಂಗ್ ಕಸ್ಟಮರ್)ಯಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಎಂಬುವರು ಬ್ಯಾಂಕ್‌ಗೆ ಮಾಸ್ಕ್ ಇಲ್ಲದೆ ಬರುವ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ನೀಡುವ ಮೂಲಕ ಕರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಬ್ಯಾಂಕ್ ಮಿತ್ರನಾಗಿ ಸೇವೆ ಸಲ್ಲಿಸುವ ಇವರು ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ತಾವೇ ಬಟ್ಟೆಗಳಿಂದ ಮಾಸ್ಕ್ ಗಳನ್ನು ತಯಾರಿಸಿ ಬ್ಯಾಂಕ್ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಆರಂಭದಲ್ಲಿ ಹುಲಿಕುಂಟೆ ಗ್ರಾಮ ಪಂಚಾಯಿತಿಯಿಂದ ಖರೀದಿಸಿ ನೀಡುತ್ತಿದ್ದ ಇವರು ನಂತರ ತಾವೇ ಬಟ್ಟೆಯಿಂದ ಹೊಲೆದು ವಿತರಿಸುತ್ತಿದ್ದಾರೆ. ಬ್ಯಾಂಕ್ ಹೊರಗಡೆ ಕೆಲಸ: ಜನರು ಯಾವುದೇ ಮುಂಜಾಗೃತ ನಿಯಮಗಳನ್ನು ಅನುಸರಿಸದೆ ಬ್ಯಾಂಕ್‌ಗೆ ಬರುವುದು ಸಾಮಾನ್ಯವಾಗಿದೆ. ಬ್ಯಾಂಕ್ ಮುಂದೆ ಗ್ರಾಹಕರಿಗೆ ಕರೊನಾ ವೈರೆಸ್ ಬಗ್ಗೆ ಮಾಹಿತಿ ನೀಡಿ ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬ್ಯಾಂಕ್‌ಗೆ ಬರುವ ಹಿರಿಯ ನಾಗರಿಕರು, ಅನಕ್ಷರಸ್ಥರಿಗೆ ಬ್ಯಾಂಕಿಗೆ ಸಂಬಂಧಿಸಿದ ಕೆಲಸ ಮಾಡಿಕೊಡುತ್ತಾರೆ. ಜತೆಗೆ ಎಲ್ಲರಿಗೂ ಮಾಸ್ಕ್ ವಿತರಿಸುವ ಕೆಲಸ ಮಾಡುತ್ತಿದ್ದಾರೆ.

20 ದಿನಗಳಿಂದ ಮನೆಯಲ್ಲಿ ಮಾಸ್ಕ್ ಹೊಲೆದು ಬ್ಯಾಂಕ್‌ಗೆ ಬರುವ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದ್ದೇನೆ. ಕರೊನಾ ನಿಯಂತ್ರಣಕ್ಕೆ ಮುಖ್ಯವಾಗಿ ಸಾಮಾಜಿ ಅಂತರ ಕಾಪಾಡುವುದು, ಎಲ್ಲರೂ ಮಾಸ್ಕ್ ಹಾಕುವುದು ಅವಶ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ. ಆಶಾ. ಬೀಸಿ (ಬ್ಯಾಂಕಿಂಗ್ ಕಸ್ಟಮರ್)ಹಾಲಹಳ್ಳಿ