ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ರಣಕೇಕೆ ಮಧ್ಯೆ ನಾಲ್ಕು ತಿಂಗಳ ಕಂದಮ್ಮವೊಂದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೂ ಶಿವನಪಾದ ಸೇರಿದ ಮನ ಕಲಕುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಈ ಸಾವು ಹೊಸ ಟ್ವಿಸ್ಟ್ನತ್ತ ಸಾಗಿದೆ.
ರಾಯಚೂರು ಮಕ್ಕಳ ಕಲ್ಯಾಣ ಸಮಿತಿಯು ಈ ಅನಾಥ ಕಂದಮ್ಮನನ್ನು ಕಲಬುರಗಿಯ ಅಮೂಲ್ಯ ಶಿಶುಗೃಹಕ್ಕೆ ಫೆಬ್ರವರಿ 3ರಂದು ದಾಖಲಿಸಿತು. ಮಾರ್ಚ್ 31ರಂದು ಮಗುವಿಗೆ ಭೇದಿ ಶುರುವಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಕೆಮ್ಮು, ಜ್ವರ ಕಾಣಿಸಿಕೊಂಡಾಗ ಜಿಲ್ಲಾ ಸರ್ಕಾರಿ ಆಸ್ಪತ್ರೆ (ಜಿಮ್ಸ್)ಗೆ ದಾಖಲಿಸಲಾಯಿತು.
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಈ ವೇಳೆ ಮಗುವನ್ನು ಕೋವಿಡ್-19 ಟೆಸ್ಟ್ ಮಾಡಿದಾಗ ವರದಿ ನೆಗೆಟಿವ್ ಬಂದಿದೆ. ಸುರಕ್ಷತೆ ದೃಷ್ಟಿಯಿಂದ ಏಪ್ರಿಲ್ 8ರಂದು ಮಗುವನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸುವಂತೆ ಸರ್ಕಾರಿ ಆಸ್ಪತ್ರೆ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ ಬಸವೇಶ್ವರ ಆಸ್ಪತೆಯಲ್ಲಿ ಕ್ಯಾಜುವಲ್ಟಿ ಸರಿ ಇಲ್ಲ, ಹೀಗಾಗಿ ಸಂಗಮೇಶ್ವರ ಆಸ್ಪತ್ರೆಗೆ ದಾಖಲಿಸುವಂತೆ ಬಸವೇಶ್ವರ ಆಸ್ಪತ್ರೆ ವೈದ್ಯರು ಶಿಫಾರಸು ಮಾಡಿದ್ದಾರೆ.
ಕೊನೆಗೆ ಸಂಗಮೇಶ್ವರ ಆಸ್ಪತ್ರೆಗೆ ದಾಖಲಿಸಿ 15ರವರೆಗೂ ಚಿಕಿತ್ಸೆ ನೀಡಲಾಗಿದ್ದು, ಮಗು ಆರೋಗ್ಯವಾಗಿತ್ತು. ವೈದ್ಯರು ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ ದಿನವೇ ಕವಲಗಾ ಗ್ರಾಮದ ಒಂದು ವರ್ಷದ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಲಾಯಿತು. ಈ ಮಗುವನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಪಾಸಿಟಿವ್ ದೃಢಪಟ್ಟಿತು.
ಮಗುವಿನ ಆಯಾಗೆ ಪಾಸಿಟಿವ್
ಆಸ್ಪತ್ರೆಗೆ ದಾಖಲಿಸಿದಾಗ ಅಮೂಲ್ಯ ಶಿಶುಗೃಹದ ಇಬ್ಬರು ಮಹಿಳಾ ಸಿಬ್ಬಂದಿ 4 ತಿಂಗಳು ಮಗುವಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಗು ಮತ್ತು ಒಬ್ಬ ಸಿಬ್ಬಂದಿಯ ತಪಾಸಣೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ. 22ರಂದು ಇನ್ನೋರ್ವ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿದಾಗ ಕರೊನಾ ಪಾಸಿಟಿವ್ ಬಂದಿದೆ. ಒಬ್ಬ ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಇನ್ನೋರ್ವ ಸಿಬ್ಬಂದಿ ಮತ್ತು ಮಗುವನ್ನು ಮತ್ತೊಮ್ಮೆ ಕರೊನಾ ತಪಾಸಣೆಗೆ ಒಳಪಡಿಸಬೇಕು ಎಂದು ಶಿಶುಗೃಹದ ಅಧೀಕ್ಷಕರು ಕೋರಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಏಪ್ರಿಲ್ 22ರಂದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.