ಜಿಲ್ಲೆ

ಕರೊನಾ ಗುಣ ಆದವರೂ ಬಿಂದಾಸ್ ಓಡಾಡಬೇಡಿ

ಹುಬ್ಬಳ್ಳಿ: ಕರೊನಾ ಸೋಂಕು ಬಂದು ಗುಣವಾದರೂ ಅವರಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ದಿನ ಇರುತ್ತದೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ. ಇನ್ನೂ ಅಧ್ಯಯನಗಳು ನಡೆಯುತ್ತಿವೆ. ಸೋಂಕು ಮುಕ್ತತೆಗೆ ಜಾಗೃತಿಯೊಂದೇ ಪರಿಹಾರ ಎಂದು ನಗರದ ಖ್ಯಾತ ಹೃದ್ರೋಗ ಹಾಗೂ ಮಧುಮೇಹ ತಜ್ಞ ಡಾ.ಜಿ.ಬಿ. ಸತ್ತೂರ ಅಭಿಪ್ರಾಯಪಟ್ಟಿದ್ದಾರೆ.

‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಸೋಂಕು ಮುಕ್ತ ಆಗಿ ಬಂದರೂ ರೋಗನಿರೋಧಕ ಶಕ್ತಿ 45ರಿಂದ 50 ದಿನದವರೆಗೆ ಇರುತ್ತದೆ ಎನ್ನಲಾಗುತ್ತಿದೆ. ಸೋಂಕು ತಾಗಿ ಗುಣವಾಗಿ ಬಂದೆ ಎಂದು ಎಲ್ಲೆಂದರಲ್ಲಿ ಓಡಾಡುವುದು ಒಳ್ಳೆಯದಲ್ಲ. ಮರು ಸೋಂಕು ತಾಗಿದರೆ ಮತ್ತಷ್ಟು ಕಷ್ಟ ಆಗಲಿದೆ. ಮಾಸ್ಕ್, ಪರಸ್ಪರ ಅಂತರ, ಕೈ ತೊಳೆಯುವುದು(ಎಂಡಿಡಬ್ಲ್ಯು) ನಿರಂತರವಾಗಿಸಿಕೊಳ್ಳಬೇಕು. ಇದನ್ನು 2021ರವರೆಗೆ ಕಾಯ್ದುಕೊಳ್ಳುವುದು ಅತ್ಯಗತ್ಯ. 2ರಿಂದ 14 ದಿನದೊಳಗೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬರುತ್ತವೆ. 14 ದಿನದೊಳಗೆ ಐಜಿಎಂ, ನಂತರ ಐಜಿಜಿ ಲೆವೆಲ್ ಗೊತ್ತಾಗುತ್ತದೆ. ಐಜಿಜಿ ಲೆವೆಲ್ (ರೋಗನಿರೋಧಕ ಶಕ್ತಿ ಪ್ರಮಾಣ) ಪರೀಕ್ಷೆ ಮಾಡಿದರೆ ಸ್ಪಷ್ಟತೆ ಗೊತ್ತಾಗುತ್ತದೆ ಎಂದಿದ್ದಾರೆ.

ವ್ಯಾಕ್ಸಿನ್ ಬಂದರೂ ಆರಾಮಾಗಿರುತ್ತೇವೆ ಎಂದು ಹೇಳಲು ಬರುವುದಿಲ್ಲ. ದೀರ್ಘಾವಧಿವರೆಗೆ ರೋಗನಿರೋಧಕ ಶಕ್ತಿ ಇರುವಂತೆ ಲಸಿಕೆ ಕಂಡುಹಿಡಿಯಬೇಕಿದೆ. ಹುಬ್ಬಳ್ಳಿ, ಬೀದರ, ಬೆಳಗಾವಿ, ಕಲಬುರಗಿ ಇತರೆಡೆ ಶೇ. 80ರಷ್ಟು ಜನರು ಸೋಂಕಿನ ಬಗೆಗೆ ನಿರ್ಲಕ್ಷ್ಯ ತಾಳಿದ್ದಾರೆ. ದಸರಾ, ದೀಪಾವಳಿ ಬಂದಿದೆ ಎಂದು ಎಲ್ಲರೂ ಕೂಡಿಕೊಂಡು ಸಂಭ್ರಮಿಸಬಾರದು. ಅವರವರ ಮನೆಯಲ್ಲಿ ಸಂಭ್ರಮ ಮಾಡಿದರೆ ಒಳಿತು.

ಸರ್ಕಾರ ಸಾರ್ವಜನಿಕ ಕಾರ್ಯಕ್ರಮ, ಸಭೆಗಳನ್ನು ರದ್ದುಗೊಳಿಸಬೇಕು. ಎಲ್ಲ ಜಾತಿ, ಧರ್ಮಗಳಿಗೂ ಅನ್ವಯಿಸುವಂತೆ ಅವರವರ ಮನೆಯಲ್ಲಿ ಹಬ್ಬದ ಆಚರಣೆ ಮಾಡುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದ್ದಾರೆ.</