ಜಿಲ್ಲೆ

ಕರೊನಾ ಗಂಭೀರತೆ ಅರಿಯದ ಜನ

Haveri

ಹಾವೇರಿ: ಕರೊನಾ 2ನೇ ಅಲೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಮೊದಲ ದಿನ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿಗ್ಗಾಂವಿಯ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದನ್ನು ಬಿಟ್ಟರೆ, ಇನ್ನುಳಿದಂತೆ ಎಲ್ಲೆಡೆ ಕರ್ಫ್ಯೂ ಆದೇಶ ಬೆಳಗ್ಗೆ 10ರಿಂದಲೇ ಆರಂಭವಾಗಿತ್ತು. ಆದರೆ, ಸಂಜೆಯವರೆಗೆ ಬೈಕ್, ಕಾರುಗಳಲ್ಲಿ ಅನಗತ್ಯವಾಗಿ ಜನರ ಓಡಾಟ ಎಂದಿನಂತೆಯೇ ಇತ್ತು.

ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಇದ್ದಷ್ಟು ಗಂಭೀರತೆಯೂ ಪೂರ್ಣ ಕರ್ಫ್ಯೂ ಸಮಯದಲ್ಲಿ ಕಂಡುಬರಲಿಲ್ಲ. ಬೆಳಗ್ಗೆ ಎಂದಿನಂತೆ ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಅಲ್ಲಿಯೂ ಜನ ಮಾರ್ಗಸೂಚಿ ಮರೆತು ವ್ಯವಹಾರ ನಡೆಸಿದರು. ಕೆಲ ಬಟ್ಟೆ, ಬಂಗಾರದ ಅಂಗಡಿಗಳು ಅರ್ಧಂಬರ್ಧ ತೆರೆದುಕೊಂಡಿದ್ದವು. ಬೆಳಗ್ಗೆ 10ರ ನಂತರ ತರಕಾರಿ, ದಿನಸಿ, ಹಾಲು ಸೇರಿ ಎಲ್ಲ ಅಂಗಡಿಗಳು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಂಡವು. ಮೆಡಿಕಲ್ ಶಾಪ್, ಆಸ್ಪತ್ರೆ, ಸಿಮೆಂಟ್, ಕಬ್ಬಿಣ ವಸ್ತು ಮಾರಾಟ, ಕೃಷಿ ಪರಿಕರಗಳ ಮಾರಾಟ ಅಂಗಡಿಗಳು, ಬ್ಯಾಂಕ್​ಗಳು ಆರಂಭಗೊಂಡಿದ್ದವು. ವಿಶೇಷವೆಂದರೆ ಹಾವೇರಿ ಬಸ್ ನಿಲ್ದಾಣದ ಎದುರುಗಡೆಯಿರುವ ಬೈಕ್ ಮಾರಾಟದ ಷೋರೂಂ ಸಹ ತೆರೆದಿತ್ತು. ಆದರೆ, ಯಾರೊಬ್ಬರೂ ಅದನ್ನು ಬಂದ್ ಮಾಡಿಸುವ ಗೋಜಿಗೆ ಹೋಗಿರಲಿಲ್ಲ. ಜನರು ಆಸ್ಪತ್ರೆ, ಔಷಧ ಖರೀದಿ, ಸಿಮೆಂಟ್, ಕಬ್ಬಿಣ ಖರೀದಿ, ಕೃಷಿ ವಸ್ತುಗಳ ಖರೀದಿ, ಬ್ಯಾಂಕ್​ಗೆ ಹೋಗುತ್ತೇವೆ ಎಂಬ ನೆಪ ಹೇಳಿ ಕರ್ಫ್ಯೂ ಜಾರಿಯಲ್ಲಿದ್ದರೂ ಸುಗಮವಾಗಿ ಸಂಚರಿಸಿದರು. ಪೊಲೀಸರ ಎದುರೇ ಬೈಕ್​ಗಳ ಸಂಚಾರ ಹೆಚ್ಚಿದ್ದರೂ ಕೆಲವರನ್ನು ವಿಚಾರಿಸಿ ಕಳಿಸಿದ್ದನ್ನು ಬಿಟ್ಟರೆ, ಹಲವರನ್ನು ತಡೆಯುವ ಗೋಜಿಗೂ ಹೋಗಲಿಲ್ಲ. ಹೀಗಾಗಿ ಕರ್ಫ್ಯೂ ಆದೇಶ ಜಾರಿಯಾಗಿದೆಯೋ ಇಲ್ಲವೋ ಎಂಬ ಗುಮಾನಿಯಂತೂ ಹಲವರನ್ನು ಕಾಡಿತು.

ಮಾರ್ಗಸೂಚಿ ಮರೆತ ಮದ್ಯದಂಗಡಿಗಳು: ಕಳೆದ ವರ್ಷದ ಲಾಕ್​ಡೌನ್ ತೆರವುಗೊಂಡ ನಂತರ ಮದ್ಯದಂಗಡಿಗಳು ಆರಂಭಗೊಂಡಿದ್ದ ಸಮಯದಲ್ಲಿ ಕರೊನಾ ಮಾರ್ಗಸೂಚಿಯನ್ನು ಎಲ್ಲ ಅಂಗಡಿಗಳಿಗಿಂತ ಹೆಚ್ಚಾಗಿ ಪಾಲಿಸಿದ್ದವು. ಅಂಗಡಿಯ ಮುಂದೆ ಕಬ್ಬಿಣ ಇಲ್ಲವೇ ಕಟ್ಟಿಗೆಯಿಂದ ಸರತಿ ಸಾಲಿನಲ್ಲಿ ಬರಲು ಗೇಟ್, ಪರಸ್ಪರ ಅಂತರ ಕಾಯಲು ಮಾರ್ಕಿಂಗ್ ಹಾಗೂ ಹೊರಗಡೆಯೇ ಸ್ಯಾನಿಟೈಸರ್ ಇಡಲಾಗಿತ್ತು. ಮದ್ಯದಂಗಡಿಗಳ ಮುಂದಿನ ಮಾರ್ಗಸೂಚಿ ಪಾಲನೆ ಎಲ್ಲರಿಗೂ ಮಾದರಿ ಅನ್ನಿಸುವಂತೆಯೂ ಇತ್ತು. ಈ ಬಾರಿಯೂ ಮದ್ಯದಂಗಡಿಗಳಿಗೆ ಕರೊನಾ ಮಾರ್ಗಸೂಚಿ ಅನುಸರಿಸಿ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಲ್ಲಿಯೂ ಯಾವುದೇ ಮಾರ್ಗಸೂಚಿ ಪಾಲನೆಯಿರಲಿಲ್ಲ. ಪರಸ್ಪರ ಅಂತರ ಕಾಯ್ದುಕೊಳ್ಳದೇ ಅಂಗಡಿಯೊಳಗೆ ಜನ ನುಗ್ಗಿದ್ದರು. ಅಂಗಡಿಗಳ ಮಾಲೀಕರು ಸಹ ಒಬ್ಬರಾದ ಮೇಲೆ ಒಬ್ಬರು ಬನ್ನಿ ಎನ್ನುವ ಬದಲು ಅಂಗಡಿಯೊಳಗೆ ಬಂದ ಎಲ್ಲರನ್ನೂ ಗುಂಪುಗೂಡಿಸಿಕೊಂಡೇ ವ್ಯಾಪಾರ ನಡೆಸಿದರು. ಅಲ್ಲದೆ, ಬಹುತೇಕ ಅಂಗಡಿಗಳ ಮುಂದೆ ಸ್ಯಾನಿಟೈಸರ್ ವ್ಯವಸ್ಥೆಯೂ ಇರಲಿಲ್ಲ. ಅಬಕಾರಿ ಇಲಾಖೆಯವರು ಯಾವ ಅಂಗಡಿಗಳ ಬಳಿಯೂ ಭೇಟಿ ನೀಡಿ ಮಾರ್ಗಸೂಚಿ ಪಾಲನೆಯ ಕುರಿತು ಜಾಗೃತಿ ಮೂಡಿಸಲಿಲ್ಲ.

ಕಟ್ಟಡ ಕಾಮಗಾರಿಗೆ ತೊಂದರೆ ಇಲ್ಲ: ಕಾರ್ವಿುಕರಿಗೆ ಕೆಲಸ ಸಿಗಲಿ ಎಂಬ ಉದ್ದೇಶದಿಂದ ಕರ್ಫ್ಯೂ ಸಮಯದಲ್ಲಿಯೂ ಕಟ್ಟಡ ಕಾಮಗಾರಿಗಳಿಗೆ ಸರ್ಕಾರ ಅವಕಾಶ ಕಲ್ಪಿಸಿದ್ದರಿಂದ ಕಟ್ಟಡ ಕಾಮಗಾರಿಗಳು ಎಂದಿನಂತೆ ಆರಂಭಗೊಂಡಿದ್ದವು.