ಜಿಲ್ಲೆ

ಕರೊನಾ ಕೇಸ್ ಮತ್ತೆ ಹೆಚ್ಚಳ

ಬೀದರ್: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದ್ದು, ಮಹಾಮಾರಿ ಮತ್ತೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೂರು ತಿಂಗಳಿಂದ ಕರೊನಾ ಗಣನೀಯ ಕಮ್ಮಿಯಾದ ಕಾರಣಕ್ಕಾಗಿ ಜಿಲ್ಲೆ ಜನರಲ್ಲಿ ನೆಮ್ಮದಿ ಮೂಡಿತ್ತು. ಆದರೀಗ ಮತ್ತೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸದಿದ್ದರೆ ಮತ್ತೆ `ಚೀನಿ ವೈರಸ್' ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಕಂಡುಬಂದಿವೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ (ಫೆ.1ರಿಂದ 7ರವರೆಗೆ) 68 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಈ ಅವಧಿಯಲ್ಲಿ ಎರಡು ಬಾರಿ ಒಂದೇ ದಿನ 18 ಪಾಸಿಟಿವ್ ಬಂದಿವೆ. ಈ ಸಂಖ್ಯೆ ಕಳೆದ ಮೂರು ತಿಂಗಳಲ್ಲೇ ಅತಿ ಹೆಚ್ಚಿನ ದಾಖಲೆಯಾಗಿದೆ. ಪಾಸಿಟಿವ್ ಪ್ರಕರಣಗಳ ಹೆಚ್ಚಳದೊಂದಿಗೆ ಜಿಲ್ಲೆಯಲ್ಲಿಯ ಸಕ್ರಿಯ ಕೇಸ್ಗಳ ಒಟ್ಟು ಸಂಖ್ಯೆ ಸಹ 65ಕ್ಕೇರಿದೆ. ಸಕ್ರಿಯ ಪ್ರಕರಣಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಜಿಲ್ಲೆಯು ಈಗ 21ನೇ ಸ್ಥಾನಕ್ಕೆ ಬಂದು ನಿಂತಿರುವುದು ತಳಮಳಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಭಾನುವಾರ 18 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಫೆ. 7ರವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ 7457 ಜನರಿಗೆ ಸೋಂಕು ತಗುಲಿದೆ. 7216 ಮಂದಿ ಪೂರ್ಣ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 65 ಸಕ್ರಿಯ ಪ್ರಕರಣಗಳಿವೆ. 172 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೈದರಾಬಾದ್, ಸೊಲ್ಲಾಪುರ, ಬೆಂಗಳೂರು ಇತರೆಡೆ ದಾಖಲಾಗಿದ್ದ 30ಕ್ಕೂ ಹೆಚ್ಚು ಮಂದಿ ಮಹಾಮಾರಿಯಿಂದ ಕೊನೆಯುಸಿಳೆದಿದ್ದಾರೆ.

ಕರೊನಾ ತಗ್ಗಿರುವುದು ಸಮಾಧಾನದ ಸಂಗತಿ. ಆದರೆ ಕರೊನಾ ಇನ್ನೂ ಹೋಗಿಲ್ಲ ಎಂಬುದು ಆತಂಕದ ವಿಷಯ. ಹೀಗಾಗಿ ಇನ್ನೂ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕರೊನಾ ಪ್ರಕೋಪ ಕಮ್ಮಿಯಾದ ಕಾರಣದಿಂದ ಈಗ ಎಲ್ಲವೂ ಮೊದಲಿನಂತೆ ಸಹಜವಾಗಿದೆ. ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ ಕಾಪಾಡುವಿಕೆ, ಸ್ಯಾನಿಟೈಸರ್ ಬಳಕೆಗೆ ಹೆಚ್ಚಿನ ಜನತೆ ವಿದಾಯ ಹೇಳಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದು ಖುಷಿ ತರುತ್ತಿದೆ. ಆದರೆ ಇದರ ಮಧ್ಯೆ ಪಾಸಿಟಿವ್ ಪ್ರಕರಣ ಕ್ರಮೇಣ ಹೆಚ್ಚುತ್ತಿರುವುದು ಭೀತಿ ಮೂಡಿಸುತ್ತಿದೆ.

ಸಕ್ರಿಯ ಪ್ರಕರಣಗಳಲ್ಲಿ
1ರಿಂದ 21ನೇ ಸ್ಥಾನಕ್ಕೆ

ಎರಡು ತಿಂಗಳ ಹಿಂದೆ ಜಿಲ್ಲೆಯು ಸಕ್ರಿಯ ಪ್ರಕರಣಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿತ್ತು. ಇನ್ನೇನು ಜಿಲ್ಲೆಯು ಶೀಘ್ರವೇ ಕರೊನಾಮುಕ್ತ ಆಗಲಿದೆ ಎನ್ನುವ ಆಶಾಭಾವ ಮೂಡಿತ್ತು. ಆದರೆ ಕ್ರಮೇಣ ಪಾಸಿಟಿವ್ ಪ್ರಕರಣ ಹೆಚ್ಚುತ್ತ ಸಾಗಿ ಸಕ್ರಿಯ ಪ್ರಕರಣಗಳಲ್ಲಿ ನಂಬರ್ ಒನ್ ಸ್ಥಾನದಿಂದ 21ನೇ ಸ್ಥಾನಕ್ಕೆ ಹೋಗಿದೆ. ಫೆ. 7ರವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 65 ಇದೆ. ಕೇವಲ 2 ಸಕ್ರಿಯ ಪ್ರಕರಣಗಳೊಂದಿಗೆ ಹಾವೇರಿ ಜಿಲ್ಲೆ ಮೊದಲ ಸ್ಥಾನ, ನಂತರದಲ್ಲಿ ಗದಗ ಹಾಗೂ ಹಾವೇರಿ ಜಿಲ್ಲೆಗಳು ಇವೆ.