ಜಿಲ್ಲೆ

ಕರೊನಾ ಕೇರ್ ಸೆಂಟರ್, ವಾರ್ಡ್​ನಲ್ಲಿ ಚಿತ್ರೀಕರಣ ನಿರ್ಬಂಧ

ಶಿವಮೊಗ್ಗ: ಕರೊನಾ ಕೇರ್ ಸೆಂಟರ್ ಹಾಗೂ ಕರೊನಾ ವಾರ್ಡ್​ಗಳಲ್ಲಿ ವಿಡಿಯೋ ಚಿತ್ರೀಕರಣ ನಿರ್ಬಂಧಿಸಿದ್ದು, ಆದೇಶ ಉಲ್ಲಂಘಿಸಿ ಚಿತ್ರೀಕರಣ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಲಿದೆ.

ಡಿಸಿ ಕಚೇರಿಯಲ್ಲಿ ಗುರುವಾರ ಸಮಿತಿ ಸಭೆಯಲ್ಲಿ ತಂಡದ ಸದಸ್ಯರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದ ಅವರು, ವಾರ್ಡ್​ಗಳಲ್ಲಿ ಸೋಂಕಿತರು ಮಾಡುತ್ತಿರುವ ಚಿತ್ರೀಕರಣ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತದೆ. ಹಾಗಾಗಿ ಮೊಬೈಲ್ ಚಿತ್ರೀಕರಣ ಮಾಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕರೊನಾ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಮೇಲುಸ್ತುವಾರಿಗೆ 24 ಹಿರಿಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನೊಳಗೊಂಡ ಜಿಲ್ಲಾ ಸರ್ವೆಕ್ಷಣಾ ತಂಡವನ್ನು ರಚಿಸಿದ್ದು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್​ಗಳನ್ನೇ ಇನ್ಸಿಡೆಂಟ್ ಕಮಾಂಡರ್​ಗಳನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾಮಟ್ಟದ ಮಾದರಿಯಲ್ಲೇ ತಾಲೂಕು ಮಟ್ಟದಲ್ಲೂ ಸಮಿತಿ ರಚಿಸಬೇಕು. ಪ್ರತಿ ದಿನ ಸಮಿತಿ ಸಭೆ ನಡೆಸಿ ವರದಿಯನ್ನು ಜಿಲ್ಲಾ ಸಮಿತಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ವಲಯದಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ತೀವ್ರಗೊಳಿಸಬೇಕು. ರೋಗ ಲಕ್ಷಣವಿಲ್ಲದ ಕರೊನಾ ಸೋಂಕಿತರಿಗೆ ಮಾರ್ಗಸೂಚಿ ಪ್ರಕಾರ ಅವರ ಮನೆಗಳಲ್ಲೇ ಸೌಲಭ್ಯವಿದ್ದರೆ ಮನೆಯಲ್ಲಿಯೇ ಐಸೋಲೇಷನ್​ಗೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳ ಆರೋಗ್ಯದ ಮೇಲೆ ಪ್ರತಿದಿನ ನಿಗಾ ಇರಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ ಇದ್ದರು.

ಶಿಕಾರಿಪುರದಲ್ಲಿ 300 ಬೆಡ್ ಸಿದ್ಧ: ಶಿಕಾರಿಪುರದ ವಸತಿ ಶಾಲೆಯಲ್ಲಿ 250 ಬೆಡ್​ಗಳು ಹಾಗೂ ದೇವರ ನರಸೀಪುರ ವಸತಿ ಶಾಲೆಯಲ್ಲಿ 50 ಬೆಡ್ ಸಜ್ಜುಗೊಳಿಸಿದ್ದು ಕರೊನಾ ಕೇರ್ ಸೆಂಟರ್ ಕಾರ್ಯಾರಂಭ ಮಾಡಬಹುದು ಎಂದು ಡಿಸಿ ತಿಳಿಸಿದರು.

ಪ್ರಸ್ತುತ ಲಭ್ಯವಿರುವ ಬೆಡ್​ಗಳು, ಮುಂದಿನ ಮೂರು ದಿನಗಳಲ್ಲಿ ಲಭ್ಯವಾಗುವ ಬೆಡ್​ಗಳು, ಆಕ್ಸಿಜನ್, ವೆಂಟಿಲೇಟರ್​ಗಳ ಬಗ್ಗೆ ಪ್ರತಿದಿನ ಮಾಹಿತಿ ಒದಗಿಸಬೇಕು. ಬೆಡ್​ಗಳನ್ನು ಒದಗಿಸುವುದರಲ್ಲಿ ಗೊಂದಲಕ್ಕೆ ಅವಕಾಶ ಮಾಡಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್​ಗಳ ವಿವರಗಳನ್ನು ಪರಿಶೀಲಿಸಿ ಶನಿವಾರದೊಳಗೆ ಮಾಹಿತಿ ನೀಡಬೇಕು ಎಂದರು.

ಕರೊನಾ ಕೇರ್ ಸೆಂಟರ್​ಗೆ ದಾಖಲಾಗುವವರು ಮನೆಯಿಂದಲೇ ಬೆಡ್​ಶೀಟ್, ಟವೆಲ್, ಟೂತ್​ಪೇಸ್ಟ್, ಬ್ರಷ್, ಸಾಬೂನು ಇತ್ಯಾದಿ ಅಗತ್ಯ ವಸ್ತು ತರಬೇಕು. . ಮನೆಯಿಂದ ಹಣ್ಣುಹಂಪಲು ಮಾತ್ರ ತರಿಸಲು ಅವಕಾಶವಿದೆ. ಇತರ ಆಹಾರ ಪದಾರ್ಥ ಮನೆಯಿಂದ ಒದಗಿಸಲು ಅವಕಾಶ ಇಲ್ಲ.

| ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿ