ಜಿಲ್ಲೆ

ಕರೊನಾ ಕೇಕೆ ಶುರುವಾದ ಹಳೇ ಭೀತಿ

ಜಯತೀರ್ಥ ಪಾಟೀಲ ಕಲಬುರಗಿ
ಕೋವಿಡ್-19 ಸಾವು ಪ್ರಕರಣ ಒಂದು ವರ್ಷ ಪೂರೈಸುವಷ್ಟರಲ್ಲಿ ಮಹಾಮಾರಿ ಮತ್ತೆ ತನ್ನ ಕಬಂದಬಾಹು ಚಾಚುವ ಬಹುತೇಕ ಲಕ್ಷಣಗಳು ಗೋಚರಿಸಿವೆ. ದಿನೇದಿನೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿರುವುದು ಗಡಿ ಜಿಲ್ಲೆ ಜನರ ನಿದ್ದೆಗೆಡಿಸಿದೆ.
ದೇಶದಲ್ಲೇ ಕರೊನಾಕ್ಕೆ ಮೊದಲ ಸಾವು ನಡೆದದ್ದು ಕಲಬುರಗಿಯಲ್ಲಿ. ದೇಶವ್ಯಾಪಿ ಆ ಸಂದರ್ಭದಲ್ಲಿ ಭಯ ಮನೆ ಮಾಡಿತ್ತು. ಎಷ್ಟೋ ಜನ ಈ ಜಿಲ್ಲೆಗೆ ಬರುವುದನ್ನೇ ಕೈಬಿಟ್ಟರು. ಒಂದು ಹಂತದಲ್ಲಿ ಕಲಬುರಗಿಯನ್ನು ವಕ್ರದೃಷ್ಟಿಯಿಂದ ನೋಡತೊಡಗಿದರು. ಇದೆಲ್ಲ ಮೀರಿ ಕರೊನಾ ಹತೋಟಿಗೆ ಬಂತು ಎನ್ನವಷ್ಟರಲ್ಲಿ ಹೊಸ ಅಲೆಯಲ್ಲಿ ಹಳೆಯ ಭೀತಿ ಶುರುವಾಗಿದೆ. ನಿತ್ಯ ಕೇವಲ 3-5ಕ್ಕೆ ಸೀಮಿತವಾಗಿದ್ದ ಕರೊನಾ ಪ್ರಕರಣ ಇದೀಗ 40-50ಕ್ಕೆ ಜಂಪ್ ಆಗಿದೆ.
ಈವರೆಗೆ 22381 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 21757 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 331 ಜನ ಸಾವನ್ನಪ್ಪಿದ್ದಾರೆ.

ಐದು ದಿನಗಳಲ್ಲಿ ಏರಿಕೆ ಕ್ರಮದಲ್ಲಿರುವ ಕರೊನಾ ಪಾಸಿಟಿವ್ ಪ್ರಕರಣ ಮಾಹಿತಿ.
ದಿನಾಂಕ ಪಾಸಿಟಿವ್ ಡಿಸ್ಚಾರ್ಜ್​ ಸಕ್ರಿಯ ಪ್ರಕರಣ ಸಾವು ಒಟ್ಟು ಪ್ರಕರಣ
10.3.21 37 10 240 - 22409
11.3.21 20 18 242 - 22265
12.3.21 38 17 262 - 22303
13.3.21 35 20 277 01 22338
14.3.21 43 27 293 - 22381
15.3.21 43 28 308 22424

ಎಚ್ಚರಿಕೆ ಗಂಟೆ: ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದು ಎಚ್ಚರಿಕೆ ಗಂಟೆ ಎಂದು ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲಟ್ರ್ಸ ಮುಂದಾಗಿದೆ. ಕಲಬುರಗಿಯ ಓಂ ನಗರ, ತಾರಫೈಲ್ ಬಡಾವಣೆ ಮತ್ತು ಖೂಬಾ ಪ್ಲಾಟ್ಗಳಲ್ಲಿ ಹೆಚ್ಚು ಕಂಡುಬರುತ್ತಿರುವ ಕಾರಣ ಹಿನ್ನೆಲೆಯಲ್ಲಿ ಈ ಮೂರು ಕಡೆ ಮೊಬೈಲ್ ಯುನಿಟ್ ವ್ಯವಸ್ಥೆ ಮಾಡಿದೆ. ಈ ಮೊದಲಿನ ನಿಯಮಾವಳಿ ಪ್ರಕಾರ 10 ಪ್ರೈಮರಿ ಮತ್ತು 10 ಸೆಕೆಂಡರಿ ಸಂಪರ್ಕ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಬೇಕಿತ್ತು. ಆದರೀಗ ಈ ಸಂಖ್ಯೆ 20ಕ್ಕೆ ಹೆಚ್ಚಿಸಲಾಗಿದೆ. ಪಾಸಿಟಿವ್ ಬಂದ ಮತ್ತು ಸಂಪರ್ಕಿತರ ಕುಟುಂಬಗಳನ್ನು ತಪಾಸಣೆಗೆ ಒಳಪಡಿಸುವುದರ ಜತೆಗೆ ಮಾಹಿತಿ ಕಲೆ ಹಾಕಬೇಕಿದೆ. ಹೆಚ್ಚುವರಿ ಇನ್ನೂ ನಾಲ್ಕು ಮೊಬೈಲ್ ಯುನಿಟ್ ಒದಗಿಸಲು ಆರೋಗ್ಯ ಇಲಾಖೆ ಯೋಜಿಸಿದೆ.

ಮಾಸ್ಕ್ ಇರದಿದ್ದರೆ ಟೆಸ್ಟ್ : ಕರೊನಾ ವೇಗ ಹೆಚ್ಚುತ್ತಿದ್ದರೂ ಕಲಬುರಗಿ ಮಂದಿ ಮಾಸ್ಕ್ ಕೈಬಿಟ್ಟಿದ್ದಾರೆ. ಬಹುತೇಕರು ಮಾಸ್ಕ್ ಇಲ್ಲದೆ ತಿರುಗಾಡುವುದು ಸಾಮಾನ್ಯವಾಗಿದೆ. ಆದರೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಪ್ರಕರಣಗಳು ಮಿಂಚಿನ ವೇಗದಲ್ಲಿ ಹೆಚ್ಚುತ್ತಿವೆ. ಹೀಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇನ್ಮುಂದೆ ಮಾಸ್ಕ್ ಧರಿಸದೆ ಸಂಚರಿಸಿದಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ಪೊಲೀಸ್ ಇಲಾಖೆ ನೆರವಿನೊಂದಿಗೆ ಇದನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಮಾಸ್ಕ್ ಹಾಕದವರನ್ನು ಗುರುತಿಸಿ ಮೊಬೈಲ್ ಯುನಿಟ್ಗಳ ಮೂಲಕ ಕರೊನಾ ಟೆಸ್ಟ್ಗೆ ಮಾದರಿ ಸಂಗ್ರಹಿಸಲಾಗುತ್ತಿದೆ.

ಗಡಿಯಲ್ಲಿ ಟೈಟ್ : ಮನೆ-ಮನೆ ಸಮೀಕ್ಷೆ ನಡೆಸಿ ಸಂಪರ್ಕಿತರ ಪತ್ತೆ ಕಾರ್ಯ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರ ಸಹಕಾರ ಸಿಗುತ್ತಿಲ್ಲ. ಜಿಲ್ಲೆಯ 80 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 72ರಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಶುರು ಮಾಡಲಾಗಿದೆ. ಮಾದರಿ ಸಂಗ್ರಹಿಸಿ ಕಲಬುರಗಿ ಜಿಮ್ಸ್ಗೆ ಕಳುಹಿಸಲು ಸೂಚಿಸಲಾಗಿದೆ. ಗಡಿ ಪ್ರದೇಶದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಮೊಬೈಲ್ ಯುನಿಟ್ ಹಾಕುವ ಚಿಂತನೆಯೂ ನಡೆದಿದೆ. ಮಹಾರಾಷ್ಟ್ರದಿಂದ ಬರುವ ಜನರ ತಪಾಸಣೆ ನಡೆಸಲಾಗುತ್ತಿದ್ದು, ಕೋವಿಡ್ ಟೆಸ್ಟ್ ರಿಪೋರ್ಟ್​ ಹೊಂದಿದ್ದರೆ ಮಾತ್ರ ಜಿಲ್ಲೆಯ ಒಳಗೆ ಬಿಡಲಾಗುತ್ತಿದೆ. ಆದರೆ ಕೆಲವರು ಜನಪ್ರತಿನಿಧಿಗಳ ಮೂಲಕ ಒತ್ತಡ ಹಾಕಿ ಒಳಪ್ರವೇಶ ಮಾಡುತ್ತಿರುವುದು ಆಡಳಿತಕ್ಕೆ ತಲೆನೋವಾಗಿದೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಆರ್ಟಿಪಿಸಿಆರ್ ಟೆಸ್ಟ್ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಈಗಾಗಲೇ ಮೂರು ಮೊಬೈಲ್ ಯುನಿಟ್ ಹಾಕಲಾಗಿದೆ. ಗಡಿ ಪ್ರದೇಶದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸಹಕರಿಸಬೇಕು. ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು.
| ಡಾ.ರಾಜಶೇಖರ ಮಾಲಿ
ಜಿಲ್ಲಾ ಆರೋಗ್ಯಾಧಿಕಾರಿ

43 ಪಾಸಿಟಿವ್, 28 ಡಿಸ್ಚಾರ್ಜ
ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ 43 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 22424ಕ್ಕೆ ಏರಿಕೆಯಾಗಿದೆ. 28 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ 21785 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. 308 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಇದುವರೆಗೆ 331 ಸೋಂಕಿತರು ಮೃತಪಟ್ಟಿದ್ದಾರೆ.