ಮೈಸೂರು: ಇಡೀ ಜಗತ್ತನ್ನು ಕಾಡುತ್ತಿರುವ ಕರೊನಾದಿಂದ ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡಿವೆ. ಆದರೆ, ಸಹಕಾರ ಕ್ಷೇತ್ರ ಮಾತ್ರ ಯಥಾಸ್ಥಿತಿ ಮುಂದುವರಿಯುತ್ತಿರುವುದು ಅದರ ಸುಸ್ಥಿರತೆಗೆ ಸಾಕ್ಷಿ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಎಂಡಿಸಿಸಿ ಬ್ಯಾಂಕ್, ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮತ್ತು ಮೈಸೂರು ನಗರದ ಎಲ್ಲ ಸಹಕಾರ ಸಂಘಗಳ ಸಹಯೋಗದಲ್ಲಿ ನಗರದ ಸಹಕಾರ ಭವನದಲ್ಲಿ ಶನಿವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್‌ನಿಂದ ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಇನ್ನಿತರ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ನಿಸರ್ಗದತ್ತವಾದ ಚಟುವಟಿಕೆಗಳು ಸ್ಥಗಿತವಾಗಲಿಲ್ಲ. ಮಾನವನಿರ್ಮಿತ ವ್ಯವಸ್ಥೆಗಳ ಮೇಲೆ ಮಾತ್ರ ಕರೊನಾ ನಕಾರಾತ್ಮಕವಾಗಿ ಪರಿಣಾಮ ಉಂಟು ಮಾಡಿದೆ. ಸಂಕಷ್ಟ ಕಾಲದಲ್ಲೂ ಪ್ರಕೃತಿ ಮತ್ತು ಸಹಕಾರ ಜತೆಜತೆಯಾಗಿ ಹೆಜ್ಜೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕ ವ್ಯವಸ್ಥೆಗೆ ಪುನಶ್ಚೇತನ ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದರು.
ಕೋವಿಡ್ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಕಟಿಸಿದ ಪರಿಹಾರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಹಕಾರ ಸಂಸ್ಥೆಗಳು ಶ್ರಮಿಸುತ್ತಿವೆ. ಸಹಕಾರ ವಲಯದಿಂದ ನಗರದಲ್ಲಿ ವಿಭಾಗ ಮಟ್ಟದ ಆರ್ಥಿಕ ಸ್ಪಂದನ ಕಾರ್ಯಕ್ರಮ ಆಯೋಜಿಸಿ, ಪರಿಹಾರ, ಸಾಲ ಸೌಲಭ್ಯವನ್ನು ವಿತರಣೆ ಮಾಡಲಾಗಿದೆ ಎಂದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಇಂದು ದೇಶದಲ್ಲಿ ಲಕ್ಷಾಂತರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಆರ್ಥಿಕತೆಗೆ ಪರ್ಯಾಯವಾಗಿ ಸಹಕಾರ ಕ್ಷೇತ್ರದ ಆರ್ಥಿಕ ವ್ಯವಸ್ಥೆ ಇದೆ ಎಂದರು.
ಕೋವಿಡ್ ರೋಗದ ವಿರುದ್ಧದ ಹೋರಾಟದಲ್ಲಿ ಸಹಕಾರ ಸಂಘಗಳು ಮತ್ತು ಸಹಕಾರಿಗಳು ಸರ್ಕಾರದೊಂದಿಗೆ ಸಾಥ್ ನೀಡಿವೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕರೊನಾ ಸೋಂಕಿನ ಕುರಿತು ಅರಿವು ಮೂಡಿಸಿದ್ದಾರೆ. ಅಂಕಿಅಂಶಗಳು, ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿ ನೆರವಾಗಿದ್ದಾರೆ. ಈ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಸಹಕಾರ ಸಂಘಗಳ ವತಿಯಿಂದ ರಾಜ್ಯದಲ್ಲಿ 41 ಸಾವಿರ ಕಾರ್ಯಕರ್ತೆಯರಿಗೆ 12.5 ಕೋಟಿ ರೂ. ವಿತರಿಸಲಾಗಿದೆ. ಅಲ್ಲದೆ, ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಸಂಗ್ರಹವಾದ ಒಟ್ಟು 128 ಕೋಟಿ ರೂ. ಪೈಕಿ 53 ಕೋಟಿ ರೂ.ಹಣ ಸಹಕಾರ ಸಂಘಗಳು ಮತ್ತು ಸಹಕಾರಿಗಳಿಂದ ದೇಣಿಗೆ ರೂಪದಲ್ಲಿ ಬಂದಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಹಕಾರ ಸಂಘಗಳ ಧ್ವಜಾರೋಹಣ ಮಾಡಿ, ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಪಂಡಿತ ಜವಾಹರಲಾಲ್ ನೆಹರು ಮತ್ತು ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ, ನಿರ್ದೇಶಕರಾದ ಟಿ.ಪಿ.ಬೋರೇಗೌಡ, ಪಿ.ಸತೀಶ್, ಬಿ.ಮಹದೇವಸ್ವಾಮಿ, ಸಿದ್ದೇಗೌಡ, ಕೆ.ಈರೇಗೌಡ, ಭೈರಪ್ಪ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಡಿ.ಬಿ.ನಾಗರಾಜು ಪಾಲ್ಗೊಂಡಿದ್ದರು.