ಜಯತೀರ್ಥ ಪಾಟೀಲ ಕಲಬುರಗಿ
ಕರೊನಾ ಸೋಂಕು ತಡೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಜತೆಗೆ ಪ್ರಧಾನಿ ಮೋದಿ ದೇಶದಲ್ಲಿ ಲಾಕ್ಡೌನ್ ಘೋಷಿಸಿದ್ದಾರೆ. ಆದರೂ ಜನ ಓಡುತ್ತಿದ್ದಾರೆ. ಹೊರಬರಬೇಡಿ ಎಂದು ಗೋಗರೆದರೂ, ಲಾಠಿ ರುಚಿ ತೋರಿಸಿದರೂ, ವಾಹನ ಜಪ್ತಿ ಮಾಡಿ ಕೇಸ್ ಹಾಕಿದ್ದರೂ ಹೊರಗೆ ತಿರುಗಾಡುವ ಧಾವಂತ ಜನರಲ್ಲಿ ಕಡಿಮೆಯಾಗಿಲ್ಲ.
ಮಹಾಮಾರಿ ವೈರಸ್ ಬಗ್ಗೆ ಜನರಲ್ಲಿ ಭಯ ಕಾಣಿಸುತ್ತಿಲ್ಲ. ಕಂಡರೂ ಬೇಜವಾಬ್ದಾರಿತನ. ಕೆಲಸ ಇದ್ದು ಹೊರಬರುವವರು ಬೆರಳೆಣಿಕೆಯಷ್ಟು ಜನ. ಆದರೆ ಏನೂ ಕೆಲಸವಿಲ್ಲದೆ ಸಿಟಿ ರೌಂಡ್ ಹಾಕುವ ಜನ ಕೌಂಟ್ಗೆ ಸಿಗುತ್ತಿಲ್ಲ.
ಜನ ನಿಯಂತ್ರಣ ಸಂಕಷ್ಟ: ಜಿಲ್ಲಾಡಳಿತಕ್ಕೆ ಕರೊನಾ ನಿಯಂತ್ರಣಕ್ಕಿಂತ ಜನರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಗಂಟೆ, ತಮಟೆ, ಜಾಗಟೆ, ಡಂಗುರ ಸಾರಿ ಜಾಗೃತಿ ಮೂಡಿಸಲಾಯಿತು. ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಕರಪತ್ರ, ರೇಡಿಯೂ, ದೂರದರ್ಶನ, ನಗರದಿಂದ ಹೋಬಳಿ ಮಟ್ಟದವರೆಗೆ ಹೋಗಿ ಮನೆಯಿಂದ ಹೊರಬರಲೇಬೇಡಿ ಎಂದು ಕೋರಿದ್ದೂ ಆಯಿತು.
ಮನೆಯಿಂದ ಹೊರಬಂದು ಬೀದಿ ಬೀದಿ ಅಲೆಯುತ್ತಿರುವ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಕೈಮುಗಿದು ಬೇಡಿಕೊಂಡಿದ್ದಾರೆ. ಸವಾರರ ಕೈಗೆ ಹೂ ಕೊಟ್ಟು ಹೇಳಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಊಟ್ಬೈಟ್ ಮಾಡಿಸಿದ್ದಾರೆ. ಬಡಾವಣೆಯ ಕಸಗುಡಿಸುವ ಶಿಕ್ಷೆಯನ್ನೂ ನೀಡಿದ್ದಾರೆ. ಹೊರಗೆ ತಿರುಗಾಡುವವರ ಬೈಕ್, ಕಾರು, ಆಟೋ ಜಪ್ತಿ ಮಾಡಿ ದಂಡ ವಿಧಿಸಿದರೂ ಕಲಬುರಗಿ ಮಂದಿಯ ಧಾವಂತ ಕಮ್ಮಿಯಾಗಿಲ್ಲ.
ಪೊಲೀಸರಿಗೆ ಬಿಸಿತುಪ್ಪ: ಲಾಠಿ ಬೀಸಿದರೆ ಪೊಲೀಸರು ಹೊಡೀತಾರೆ ಅಂತಾರೆ, ಹೊಡೆಯದೇ ಹೋದರೆ ಟೈಟ್ ಮಾಡುತ್ತಿಲ್ಲ ಅಂತಾರೆ. ಕೆಲವೊಮ್ಮೆ ಮಂತ್ರಿಗಳೂ ತದ್ವಿರುದ್ಧ ಹೇಳಿಕೆ ಕೊಡುತ್ತಾರೆ. ಜನರನ್ನು ಹೊಡೆಯಬೇಡಿ, ಬೆದರಿಸಿ ಕಳಿಸಿ ಎಂದು ಹೇಳುತ್ತ ಪೊಲೀಸರಿಗೆ ಬಿಸಿತುಪ್ಪವಾಗಿದ್ದಾರೆ. ಲಾಠಿ ಚಾರ್ಜ್ ಮಾಡ್ತಾರೆ, ವಾಹನ ಜಪ್ತಿ ಮಾಡ್ತಾರೆ, ಕೇಸ್ ಹಾಕ್ತಾರೆ ಎಂದು ಗೊತ್ತಿದ್ದೂ ಮನೆಯಿಂದ ಹೊರಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಸಂಜೆ ಹೊತ್ತಿನಲ್ಲಿ ಎಂದಿನಂತೆ ವಾಹನಗಳು ಓಡಾಡುತ್ತಿವೆ. ಸರ್ಕಾರಿ ಆದೇಶಗಳಿಗೆ ಕಿಮ್ಮತ್ತು ಇಲ್ಲದಂತಾಗಿದೆ.
2 ವಾರ ಕ್ರೂಸಿಯಲ್ : ಕರೊನಾ ಕಂಟ್ರೋಲ್ ಹಿನ್ನೆಲೆಯಲ್ಲಿ ಈ ಎರಡು ವಾರ ಕ್ರೂಸಿಯಲ್ ಇದೆ. ಅಂತಲೇ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್ಡೌನ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಮನೆಯಿಂದ ಬರದೆ ಸಹಕಾರ ನೀಡುವಂತೆ ಕೈಮುಗಿದು ಕೇಳಿಕೊಂಡಿದ್ದಾರೆ. ಮೋದಿ ಕೈಮುಗಿದ ದಿನ ಮನೆಯಲ್ಲಿ ಕುಳಿತಂತೆ ಮಾಡಿದ ಜನ, ಮರುದಿನ ಇಡೀ ಮನೆ ಮಂದಿ ರೋಡಿಗೆ ಬಂದ ಉದಾಹರಣೆಗಳೂ ಇವೆ.
ಕರೊನಾ ಹಿನ್ನೆಲೆಯಲ್ಲಿ ನಾನೂ ಸ್ವಯಂಪ್ರೇರಿತ ಹೋಂ ಕ್ವಾರಂಟೈನ್ನಲ್ಲಿದ್ದೇನೆ. ಸರ್ಕಾಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಿವೆ. ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ನಿಯಂತ್ರಣದಲ್ಲಿದೆ. ಆದರೂ ಜನ ಮನೆಯಿಂದ ಹೊರಬರದೆ ಜಿಲ್ಲಾಡಳಿತ, ಸರ್ಕಾರದೊಂದಿಗೆ ಕೈಜೋಡಿಸಬೇಕು. ಆಗಲೇ ಕರೊನಾ ವೈರಸ್ ನಿಯಂತ್ರಣ ಸಾಧ್ಯ.
| ಪ್ರೊ.ಎಚ್.ಎಂ. ಮಹೇಶ್ವರಯ್ಯ
ಕುಲಪತಿ, ಕರ್ನಾಟಕ ಕೇಂದ್ರೀಯ ವಿವಿ