ಜಿಲ್ಲೆ

ಕರೊನಾ ಎಫೆಕ್ಟ್, ಬಸ್ ನಿಲ್ದಾಣ ಕ್ಲೀನ್ ಮೆಟ್ಟಿಲು, ಆವರಣ ಸ್ವಚ್ಛಗೊಳಿಸಿದ ಪೌರಕಾರ್ಮಿಕರು

ಚಿಕ್ಕಬಳ್ಳಾಪುರ : ತಿಂಗಳಾನುಗಟ್ಟಲೆ ತ್ಯಾಜ್ಯದಿಂದ ತುಂಬಿದ್ದ ಖಾಸಗಿ ಬಸ್ ಹೊಸ ನಿಲ್ದಾಣವನ್ನು ಕರೊನಾ ಹಿನ್ನೆಲೆಯಲ್ಲಿ ಸ್ವಚ್ಛಗೊಳಿಸಲಾಯಿತು. ಬುಧವಾರ ಬೆಳಗ್ಗೆಯೇ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡಿ, ಮೆಟ್ಟಿಲು, ಆವರಣವನ್ನು ತೊಳೆದಿದ್ದಾರೆ. ಅಲ್ಲದೆ ರಾಸಾಯನಿಕಗಳನ್ನೂ ಸಿಂಪಡಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಟಿ.ಚನ್ನಯ್ಯ ಪಾರ್ಕಿಗೆ ಹೊಂದಿಕೊಂಡಿರುವ ಬಸ್ ನಿಲ್ದಾಣವನ್ನು ನಗರಸಭೆಯ 8.37 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾಗಿದ್ದು 2016 ಜು.2 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಒಂದು ಅಂತಸ್ತಿನ ಈ ಕಟ್ಟಡದಲ್ಲಿ ಬಸ್‌ಗಳ ನಿಲುಗಡೆಗೆ ವಿಶಾಲವಾದ ಆವರಣ, ವ್ಯಾಪಾರ ವಹಿವಾಟಿಗಾಗಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿಯವರೆಗೂ ಬಳಕೆಗೆ ಮಾತ್ರ ಬಂದಿಲ್ಲ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿರುವುದಲ್ಲದೆ ಕಟ್ಟಡವು ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.ಮಳಿಗೆಯಲ್ಲಿನ ಅಂಗಡಿಗಳ ಮುಂಭಾಗ ಮತ್ತು ಮೆಟ್ಟಿಲುಗಳ ಮೇಲೆ ಕಸ ಕಡ್ಡಿ ತುಂಬಿ ತುಳುಕಾಡುತ್ತಿತ್ತು. ಸಿಗರೇಟು, ಮದ್ಯದ ಬಾಟಲ್‌ಗಳು, ಪ್ಲಾಸ್ಟಿಕ್ ಕವರ್ ಅಲ್ಲಲ್ಲಿ ಬಿದ್ದಿರುತ್ತಿದ್ದವು. ಇನ್ನೂ ಕೆಲವರು ಎಲೆ ಅಡಕೆ ತಿಂದು ಉಗಿದಿರುವುದರಿಂದ ಗೋಡೆಗಳು ಗಲೀಜಾಗಿದ್ದವು. ಕತ್ತಲಾಗುತ್ತಿದ್ದಂತೆ ಹಲವರು ಇಲ್ಲಿಯೇ ಕುಳಿತು ಮದ್ಯ ಸೇವಿಸುತ್ತಾರೆ ಹಾಗೂ ಜೂಜಾಡುತ್ತಾರೆ.

ಸಾಂಕ್ರಾಮಿಕ ರೋಗಳ ತಾಣ : ಪಿಎಲ್ ಡಿ ಬ್ಯಾಂಕ್, ತಾಲೂಕು ಕಚೇರಿ, ತಾಪಂ ಕಚೇರಿ, ಪತ್ರಕರ್ತರ ಭವನ ಸೇರಿ ಇತರ ಕಚೇರಿಗಳಿಗೆ ಬರುವ ಜನರು, ಖಾಸಗಿ ಬಸ್ಸಿಗೆ ಕಾಯುವ ಪ್ರಯಾಣಿಕರಿಂದ ಇಲ್ಲಿ ಸದಾ ಜನಸಂದಣಿ ಹೆಚ್ಚಾಗಿರುತ್ತದೆ. ಇದರಲ್ಲಿ ಬಹುತೇಕರು ಕಾಂಪೌಂಡನ್ನು ಬಯಲು ಶೌಚಗೃಹವನ್ನಾಗಿಸಿಕೊಂಡಿದ್ದು ಅನೈರ್ಮಲ್ಯ ಮತ್ತು ದುರ್ನಾತದಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಜನರನ್ನು ಕಾಡುತ್ತಿದ್ದರೂ ನಗರಸಭೆ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಸ್ವಚ್ಛತೆ ಕೈಗೊಂಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂಗಡಿಗಳನ್ನು ಬಾಡಿಗೆಗೆ ಕೊಡುವವರೆಗೂ ನೈರ್ಮಲ್ಯ ಹದಗೆಡದಂತೆ ಸಮರ್ಪಕವಾಗಿ ನಿರ್ವಹಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.