ಚಿಕ್ಕಬಳ್ಳಾಪುರ: ತಾಲೂಕು ಮಟ್ಟದಲ್ಲಿ ಸ್ಥಾಪನೆಯಾಗುತ್ತಿರುವ ಕರೊನಾ ಚಿಕಿತ್ಸೆಯ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಇಲ್ಲಿಯವರೆಗೂ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಆಯಾ ತಾಲೂಕಿನ ವಿಶೇಷ ಆಸ್ಪತ್ರೆಗಳಲ್ಲಿ ಹೊಸ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ತಾಲೂಕಿನಲ್ಲಿರುವ ಕ್ವಾರಂಟೈನ್ ಸೆಂಟರ್ ಗಳನ್ನು ಕೋವಿಡ್-19 ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಸೋಂಕು ಪ್ರಕರಣಗಳು ಕಂಡು ಬಂದರೆ ಆಯಾ ವ್ಯಾಪ್ತಿಯಲ್ಲಿ ಚಿಕಿತ್ಸೆ ಕೊಡಿಸಬೇಕು. ಊಟ ಸೇರಿ ಇತರೆ ಮೂಲ ಸೌಕರ್ಯ ಒದಗಿಸಬೇಕು. ಇದರಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಆಯಾ ತಹಸೀಲ್ದಾರ್ ಮತ್ತು ನಗರಸಭೆ ಆಯುಕ್ತರು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ತಟ್ಟೆ, ಲೋಟ, ಚಮಚಗಳನ್ನು ಮರು ಬಳಕೆ ಮಾಡುವ ಹೋಟಲ್, ಪಾನಿಪೂರಿ, ಟೀ ಅಂಗಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹಾಗೆಯೇ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಇಲ್ಲಿಯವರೆಗೂ ಉತ್ತಮ ಕಾರ್ಯ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಸೋಂಕನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಮುಂಬರುವ ದಿನಗಳಲ್ಲೂ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬಹು ಮುಖ್ಯವಾಗಿ ಸ್ವಯಂ ಕಾಳಜಿ ತೋರಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರುತ್ತದೆ. ಪಾಲಕರು ಪರೀಕ್ಷಾ ಕೇಂದ್ರ ಬಳಿ ಮಕ್ಕಳನ್ನು ಬಿಟ್ಟು ತೆರಳಬೇಕು. ಪರೀಕ್ಷೆ ಮುಗಿದ ಬಳಿಕ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ನಗಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಪೌರಾಯುಕ್ತ ಲೋಹಿತ್, ತಹಸೀಲ್ದಾರ್ ನಾಗಪ್ರಶಾಂತ್, ಅರುಂಧತಿ ಮತ್ತಿತರರು ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಚರ್ಚೆ : ಜೂ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಜೂ.24 ರಂದೇ ಪರೀಕ್ಷೆ ಕೊಠಡಿಗಳು ಮತ್ತು ನಿಗದಿತ ಸ್ಥಳದಲ್ಲಿ ವಿದ್ಯಾರ್ಥಿಗಳು ಕೂರಲು ನೋಂದಣಿ ಸಂಖ್ಯೆ ಬರೆಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳ ಎದುರು ವಿದ್ಯಾರ್ಥಿಗಳು ಗುಂಪು ಸೇರಬಾರದು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇದ್ದು ವಿದ್ಯಾರ್ಥಿಗಳು ಸ್ಯಾನಿಟೈಸ್, ಮಾಸ್ಕ್ ಬಳಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಯಾರಿಗಾದರೂ ಅನಾರೋಗ್ಯ ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದರು.