ಜಿಲ್ಲೆ

ಕರೊನಾ, ಅಕಾಲಿಕ ಮಳೆ ಎಫೆಕ್ಟ್ : ಹಣ್ಣಿನ ವ್ಯಾಪಾರ ಕುಸಿತ



ಅವಿನಾಶ್ ಜೈನಹಳ್ಳಿ

ಮೈಸೂರು:‘ಎರಡು ವರ್ಷದ ಹಿಂದೆ ನಡೆಯುತ್ತಿದ್ದ ಅರ್ಧದಷ್ಟು ವ್ಯಾಪಾರವೂ ಈಗ ನಡೆಯುತ್ತಿಲ್ಲ. ಮಾರುಕಟ್ಟೆಗೆ ಹಣ್ಣಿನ ಲೋಡ್‌ಗಳು ಬರುತ್ತಿಲ್ಲ. ಬೆಲೆ ಏರಿಕೆಯಾಗಿರುವ ಕಾರಣ ಹಣ್ಣನ್ನು ಕೊಳ್ಳಲು ಬಿಡಿ ವ್ಯಾಪಾರಿಗಳು ಸಹ ಮನಸ್ಸು ಮಾಡುತ್ತಿಲ್ಲ. ವ್ಯಾಪಾರ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಈ ವ್ಯಾಪಾರ ನಂಬಿರುವ ನಮಗೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ…’!


ಇದು ನಗರದ ನ್ಯೂ ಸಯ್ಯಜಿರಾವ್ ರಸ್ತೆಯ ಹಳೇ ಎಪಿಎಂಸಿಯ ಹಣ್ಣುಗಳ ಸಗಟು ವ್ಯಾಪಾರಿ ರೋಷನ್ ಜಮೀರ್ ಅವರ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಕಿಜರ್ ಅಹಮ್ಮದ್ ಅವರ ನೋವಿನ ನುಡಿ. ಅಂದ ಹಾಗೆ ಇದು ಕಿಜರ್ ಅಹಮ್ಮದ್ ಅವರ ನುಡಿ ಮಾತ್ರ ಅಲ್ಲ, ಮೈಸೂರಿನ ಬಹುತೇಕ ಸಗಟು ಹಣ್ಣಿನ ವ್ಯಾಪಾರಿಗಳು, ಅಲ್ಲಿ ಕೆಲಸ ಮಾಡುವ ಸಿಬ್ಬಿಗಳು ಮತ್ತು ರಸ್ತೆ ಬದಿ ಹಣ್ಣಿನ ವ್ಯಾಪಾರಿಗಳ ಗೋಳು ಕೂಡ.
ಮಹಾಮಾರಿ ಕರೊನಾ ವೈರಸ್‌ನ ಕರಿನೆರಳು ಹಣ್ಣಿನ ವ್ಯಾಪಾರದ ಮೇಲೂ ಬಿದ್ದಿದ್ದು, ರೈತರು ಮತ್ತು ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಕರೊನಾ ಜತೆಗೆ ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಮೈಸೂರಿನಲ್ಲಿ ಸಗಟು ಹಣ್ಣಿನ ವ್ಯಾಪಾರ ಶೇ.70ರಷ್ಟು ಕುಸಿತ ಕಂಡಿದ್ದು, ಸಗಟು ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ 5 ರಿಂದ 6 ಕೋಟಿ ರೂ.ವಹಿವಾಟು ನಡೆಸುತ್ತಿದ್ದ ಹಣ್ಣಿನ ಸಗಟು ವ್ಯಾಪಾರಿಗಳಿಂದು 30 ರಿಂದ 50 ಲಕ್ಷ ರೂ.ಗಳ ವಹಿವಾಟು ಮಾತ್ರ ನಡೆಸುತ್ತಿದ್ದಾರೆ.
ನ್ಯೂ ಸಯ್ಯಜಿರಾವ್ ರಸ್ತೆಯ ಹಳೇ ಆರ್‌ಎಂಸಿಯಲ್ಲಿ ಮಾವಿನ ಹಣ್ಣಿನ ಸಗಟು ವ್ಯಾಪಾರ ಕುಸಿತ ಕಂಡಿದೆ. ನಿತ್ಯವೂ ದ್ರಾಕ್ಷಿ, ಪೈನಾಪಲ್, ಕರ್ಬೂಜ, ಕಿತ್ತಳೆ, ಕಲ್ಲಂಗಡಿ, ಮೋಸಂಬಿ ಸೇರಿದಂತೆ ಹಲವಾರು ಹಣ್ಣುಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದವು. ಇದರಿಂದ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಮಹಾರಾಷ್ಟ್ರ, ನಾಗಪುರ, ರಾಜಸ್ಥಾನ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಗುಜರಾತ್ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ನಿತ್ಯ ಲೋಡುಗಟ್ಟಲೆ ಹಣ್ಣುಗಳು ಬರುತ್ತಿದ್ದವು.


ನಗರದ ಯಾವುದೇ ರಸ್ತೆ, ವೃತ್ತ, ಮಾರುಕಟ್ಟೆ, ಅಂಗಡಿಗಳ ಮುಂದೆ ಕಣ್ಣಾಡಿಸಿದರೂ ಅಲ್ಲಿ ರಾಶಿ ರಾಶಿ ಹಣ್ಣುಗಳು ಕಾಣುತ್ತಿದ್ದವು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಮುಂದೆಯೂ ಎಲ್ಲ ಬಗೆಯ ಹಣ್ಣುಗಳು ಪರಿಮಳ ಬೀರುತ್ತಿದ್ದವು. ಆದರೀಗ ನಿರೀಕ್ಷಿತ ಪ್ರಮಾಣದಲ್ಲಿ ಹಣ್ಣಿನ ಲೋಡು ಬರದ ಕಾರಣ ಸಗಟು ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಕಿತ್ತಳೆ ಆಮದು ಕಡಿಮೆ
ಇತ್ತ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನಗರದಲ್ಲಿ ಎತ್ತ ಕಣ್ಣಾಡಿಸಿದರೂ ರಾಶಿ ರಾಶಿ ಕಿತ್ತಳೆ ಹಣ್ಣುಗಳು ಕಾಣುತ್ತಿದ್ದವು. ಆದರೆ, ಈ ಬಾರಿ ಕಿತ್ತಲೆ ಹಣ್ಣಿನ ವ್ಯಾಪಾರವೂ ಡಲ್ ಆಗಿದೆ. ಪ್ರತಿ ವರ್ಷ ಜನವರಿಯಲ್ಲಿ ಮೈಸೂರಿನ ಸಗಟು ವ್ಯಾಪಾರದಲ್ಲಿ ಪ್ರವಾಹ ಸೃಷ್ಟಿಸುತ್ತಿದ್ದ ಕಿತ್ತಳೆ ಹಣ್ಣಿನ ವ್ಯಾಪಾರವೂ ಈ ಬಾರಿ ನಿರೀಕ್ಷೆ ಪ್ರಮಾಣದಲ್ಲಿ ಇಲ್ಲವಾಗಿದೆ. ಈ ಹಿಂದೆ ಮಡಿಕೇರಿ ಮತ್ತು ಮಹಾರಾಷ್ಟ್ರದ ನಾಗಪುರದಿಂದ ಮೈಸೂರಿಗೆ ನಿತ್ಯ 10 ಕ್ಕೂ ಹೆಚ್ಚು ಲೋಡ್ ಕಿತ್ತಳೆ ಬರುತ್ತಿತ್ತು. ಪ್ರತಿದಿನ ನೂರಾರು ಚಿಲ್ಲರೆ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು ಬಂದು ಸಗಟು ವ್ಯಾಪಾರದಲ್ಲಿ ಹಣ್ಣನ್ನು ಕೊಂಡುಕೊಳ್ಳುತ್ತಿದ್ದರು. ಬಳಿಕ ಗ್ರಾಹಕರಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು. ಆದರೀಗ ವಾರಕ್ಕೆ 8 ಲೋಡು ಬಂದರೆ ಅದೇ ಹೆಚ್ಚು.


ಹಿಂದೆ ಸಗಟು ವ್ಯಾಪಾರದಲ್ಲಿ ಒಂದು ಕೆ.ಜಿ.ಕಿತ್ತಳೆ ಹಣ್ಣಿನ ಬೆಲೆ 10 ರಿಂದ 20 ರೂ.ಗಳಲ್ಲಿ ದೊರೆಯುತ್ತಿತ್ತು. ಚಿಲ್ಲರೆ ವ್ಯಾಪಾರದಲ್ಲೂ ಒಂದು ಕೆ.ಜಿ.ಕಿತ್ತಳೆ ಹಣ್ಣಿನ ಬೆಲೆ 20 ರಿಂದ 30 ರೂ.ಗಳಲ್ಲಿ ದೊರೆಯುತ್ತಿತ್ತು. ಆದರೀಗ ಸಗಟು ವ್ಯಾಪಾರದಲ್ಲೇ ಒಂದು ಕೆ.ಜಿ.ಕಿತ್ತಳೆ ಹಣ್ಣಿನ ಬೆಲೆ 50 ರಿಂದ 52 ರೂ. ಆಗಿದೆ. ಚಿಲ್ಲರೆ ವ್ಯಾಪಾರದಲ್ಲಿ 65 ರೂ. ದಾಟಿದೆ. ಕೊಡಗು ಕಿತ್ತಲೆ ಹಣ್ಣಿಗೆ ಸಗಟು ವ್ಯಾಪಾರದಲ್ಲಿ ಒಂದು ಕೆ.ಜಿ. 70 ರೂ.ಇದೆ.


ಆಂಧ್ರಪ್ರದೇಶದಿಂದ ನಿತ್ಯ 2 ಲೋಡ್ ಮೋಸಂಬಿ ಬರುತ್ತಿದ್ದು, ಸಗಟು ವ್ಯಾಪಾರದಲ್ಲಿ ಕೆ.ಜಿ. ಹಣ್ಣಿಗೆ 45 ರಿಂದ 50 ರೂ ಇದೆ. ಆಂಧ್ರಪ್ರದೇಶದಿಂದ ವಾರಕ್ಕೆ ಎರಡು ಲೋಡ್ ಕಲ್ಲಂಗಡಿ ಬರುತ್ತಿದ್ದು, ಸಗಟು ವ್ಯಾಪಾರದಲ್ಲಿ ಕೆ.ಜಿ.ಗೆ 20 ರಿಂದ 25 ರೂ. ಇದೆ.


ಉದ್ಯೋಗಿಗಳ ಸಂಖ್ಯೆ ಕಡಿಮೆ
ವ್ಯಾಪಾರ ಕುಂಠಿತಗೊಂಡಿರುವ ಕಾರಣ ನ್ಯೂ ಸಯ್ಯಜಿರಾವ್ ರಸ್ತೆಯ ಹಳೇ ಎಪಿಎಂಸಿಯ ಹಣ್ಣುಗಳ ಸಗಟು ವ್ಯಾಪಾರಿಗಳ ಮಳಿಗೆಗಳಲ್ಲಿ ದಿನನಿತ್ಯ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೋಷನ್ ಜಮೀರ್ ಅವರ ಮಳಿಗೆಯಲ್ಲಿ ಈ ಹಿಂದೆ 30ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆದರೀಗ 10 ಜನ ಮಾತ್ರ ಇದ್ದಾರೆ. ಇಲ್ಲಿನ ಎಲ್ಲ ಮಳಿಗೆಗಳಲ್ಲೂ ಕೆಲಸಗಾರರು ಕಡಿಮೆಯಾಗಿದ್ದಾರೆ ಎನ್ನುತಾರೆ ಕಿಜರ್ ಅಹಮ್ಮದ್.

ಕೋಟ್

ಅಕಾಲಿಕ ಮಳೆಯಿಂದಾಗಿ ಹಣ್ಣಿನ ಫಸಲು ಕಡಿಮೆಯಾಗಿದೆ. ಜತೆಗೆ, ಕರೊನಾ ಕಾರಣದಿಂದ ಮೈಸೂರಿನ ಸಗಟು ಹಣ್ಣಿನ ವ್ಯಾಪಾರ ಕುಸಿತ ಕಂಡಿದೆ. ಎರಡು ವರ್ಷದಿಂದ ವ್ಯಾಪಾರದಲ್ಲಿ ಶೇ.30 ರಷ್ಟು ವಹಿವಾಟು ಆಗುತ್ತಿಲ್ಲ. ಆಮದು ಕಡಿಮೆಯಾಗಿದೆ. ಹಾಗಾಗಿ, ಬಹುತೇಕ ಎಲ್ಲ ಹಣ್ಣಿನ ಬೆಲೆಯೂ ಹೆಚ್ಚಾಗಿದ್ದು, ವ್ಯಾಪಾರ ಕುಸಿತ ಕಂಡಿದೆ.
ಕಿಜರ್ ಅಹಮ್ಮದ್, ಹಣ್ಣಿನ ವ್ಯಾಪಾರಿ