ಸಾಗರ: ತಾಲೂಕಿನಲ್ಲಿ ಕರೂರು, ಭಾರಂಗಿ ಹೋಬಳಿಯಲ್ಲಿ ಬಿಎಸ್‌ಎನ್‌ಎಲ್‌ನಿಂದ 46 ಟವರ್ ನಿರ್ಮಿಸಲಾಗುತ್ತಿದ್ದು ಹೊಸನಗರದಲ್ಲಿ 36 ಟವರ್ ನಿರ್ಮಿಸಲು ಅನುಮತಿ ದೊರೆತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್ ಟವರ್ ನಿರ್ಮಿಸಿ ಸಂಪರ್ಕ ಕಲ್ಪಿಸುವ ಸಂಬಂಧ ಶುಕ್ರವಾರ ಕರೆದಿದ್ದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟವರ್‌ಗಳಿಗೆ ನಿರಂತರ ವಿದ್ಯುತ್ ಬೇಕಿದ್ದು, ಸೋಲಾರ್ ಪ್ಲಾಂಟ್ ಅಳವಡಿಸಲು ಎರಡು ಸಾವಿರ ಅಡಿ ಜಾಗ ಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. ಈ ಸಂಬಂಧ ತಹಸೀಲ್ದಾರ್ ಜತೆ ಚರ್ಚೆ ನಡೆಸಲಾಗಿದೆ. ಬೇಡಿಕೆ ಇರುವ ಕಡೆ ಜಾಗ ನೀಡಲು ಕೆಲವು ಸಮಸ್ಯೆಗಳಿವೆ. ಕಾನೂನು ತೊಡಕು ಇರುವುದರಿಂದ ಲೋಕಸಭಾ ಸದಸ್ಯರ ಗಮನಕ್ಕೆ ತಂದು ಕಾಯ್ದೆ ಸರಳೀಕರಿಸಲು ಮನವಿ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ 500 ದಿನಗಳ ಕಾಲಮಿತಿಯಲ್ಲಿ ಟವರ್ ನಿರ್ಮಿಸಿ, ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ. ಆದರೆ ಕೇವಲ 50 ದಿನಗಳಲ್ಲಿ ಟವರ್ ಅಳವಡಿಸಿ, ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರ ದೇಶದ ಐದು ರಾಜ್ಯಗಳಲ್ಲಿ ಉಚಿತ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ಪೈಲಟ್ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ ಸೇರಿಸಲಾಗಿದೆ. ಈಗಾಗಲೆ ಸಂಪರ್ಕ ಕೋರಿ 1,600 ಅರ್ಜಿಗಳು ಬಂದಿದ್ದು, ಈ ಪೈಕಿ 750 ಜನರಿಗೆ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಲವರು ಸಂಪರ್ಕ ಅಳವಡಿಸಿಕೊಂಡಿದ್ದು ಖರ್ಚು ಭರಿಸಲು, ಹೊಸ ಪ್ರಾಂಚೈಸಿಗಳ ನೇಮಕ ಕುರಿತು ಗಮನ ಹರಿಸಲಾಗುತ್ತದೆ.
ಮಲೆನಾಡಿನ ಹಳ್ಳಿಗಳಲ್ಲಿ ಸಂಪರ್ಕ ಸಮಸ್ಯೆ ಇರುತ್ತದೆ. ಕೆಲವು ಹಳ್ಳಿಗಳಲ್ಲಿ ಸಂಪರ್ಕ ಕಲ್ಪಿಸಲು ತೊಡಕಾಗಬಹುದು. ಆದರೂ ಶಕ್ತಿಮೀರಿ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತದೆ, ತುರ್ತು ಅವಶ್ಯಕತೆ ಇರುವವರು ಅರ್ಜಿ ಸಲ್ಲಿಸಿದ್ದಾರೆ, ಅವರಿಗೆ ಸಂಪರ್ಕದಂತಹ ಸೌಲಭ್ಯಗಳನ್ನು ನೀಡಬೇಕಾಗಿದ್ದು ಸಹ ನಮ್ಮ ಜವಾಬ್ದಾರಿ ಎಂದು ಹೇಳಿದರು.
ಬಿಎಸ್‌ಎನ್‌ಎಲ್ ಅಧಿಕಾರಿ ಜಯಕುಮಾರ್ ಮಾತನಾಡಿ, ಬಿಎಸ್ಸೆನ್ನೆಲ್ ಟವರ್‌ಗಳು 125 ಅಡಿ ಎತ್ತರವಿದ್ದು 2 ಕಿಮೀ ವಿಸ್ತಾರದಲ್ಲಿ ಸಂಪರ್ಕ ಸಾಧ್ಯವಾಗಲಿದೆ. 4ಜಿ ತಂತ್ರಜ್ಞಾನದ ಅಳವಡಿಕೆ ಮಾಡಲಾಗುತ್ತದೆ. ಈಗಾಗಲೇ ಟವರ್ ನಿರ್ಮಾಣದ ಕುರಿತು ಸರ್ವೇ ಕಾರ್ಯ ನಡೆದಿದೆ ಎಂದು ಸಭೆಗೆ ಮಾಹಿತಿ ನೀಡಿದರು.