ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯವ್ವನಗುಂಡಿಯಲ್ಲಿ 15 ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದ್ದು, ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
2-3 ದಿನಗಳ ಹಿಂದೆಯೇ ಈ ರೀತಿಯ ರೋಗ ಲಕ್ಷಣ ಕಾಣಿಸಿಕೊಂಡಿದ್ದರೂ ಗ್ರಾಮಸ್ಥರು ಹಳ್ಳಿ ಔಷಧದ ಮೂಲಕ ಗುಣಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ವಿಷಯ ತಿಳಿದ ಸ್ಥಳೀಯ ಬಿಜೆಪಿ ಮುಖಂಡ ವಿಠ್ಠು ಶೆಳಕೆ 15 ಜನರನ್ನೂ ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ, ಮದನೂರು ಪಿಡಿಒ ಮಂಜುನಾಥ ಇತರರು ಸಹ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಮನವೊಲಿಸಿದ್ದಾರೆ. ಅನಾರೋಗ್ಯಕ್ಕೆ ಕುಡಿಯುವ ನೀರು ಕಾರಣ?: ಗ್ರಾಮದಲ್ಲಿರುವ ಕೊಳವೆ ಬಾವಿಯೊಂದರ ಮೂಲಕ ಮೂರು ಟ್ಯಾಂಕ್ಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಅದನ್ನು ಮನೆಮನೆಗೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆ ನೀರಿನ ಮೂಲಕವೇ ರೋಗ ಹರಡಿರುವ ಸಾಧ್ಯತೆಯಿದ್ದು, ಅದನ್ನು ತಿಳಿಯಲು ನೀರಿನ ಮಾದರಿಯನ್ನು ಪಂಚಾಯಿತಿ ಹಾಗೂ ಆರೋಗ್ಯ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಏಕಾಏಕಿ ಇಷ್ಟು ಜನರಲ್ಲಿ ಕಾಲರಾದಂತಹ ಲಕ್ಷಣ ಕಂಡು ಬಂದಿದ್ದು, ಇನ್ನಷ್ಟು ಜನರಿಗೆ ರೋಗ ತಗುಲುವ ಮುನ್ನವೇ ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕಾಗಿದೆ. ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಜನರಿಗೆ ಮಾರ್ಗದರ್ಶನ ಮಾಡಿ, ಜಾಗೃತಿ ಮೂಡಿಸಬೇಕಾಗಿದೆ. | ವಿಠ್ಠು ಶೆಳಕೆ ಸ್ಥಳೀಯ ಮುಖಂಡ