ಜಿಲ್ಲೆ

ಕರಿಘಟ್ಟದಲ್ಲಿ ವಿಜೃಂಭಣೆಯ ರಥೋತ್ಸವ

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದ ಕರಿಘಟ್ಟ ಬೆಟ್ಟದ ಶ್ರೀಪದ್ಮಾವತಿ-ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮ ಸಮೀಪದ ಬೆಟ್ಟದಲ್ಲಿ ಶುಕ್ರವಾರ ತಡರಾತ್ರಿ ವಿಶೇಷ ಪೂಜೆಗಳೊಂದಿಗೆ ಗಜೇಂದ್ರಮೋಕ್ಷ ಆಚರಣೆ ನಡೆಸಿದ್ದು, ಮುಂಜಾನೆ 4 ಗಂಟೆಗೆ ಪ್ರಾತಃಕಾಲದಲ್ಲಿ ದೇಗುಲದ ಅರ್ಚಕರು ಸುಪ್ರಭಾತ ಸೇವೆ, ನಿತ್ಯಾರಾಧನೆ, ಶಾತಮೊರೈ, ಮಂಗಳಸ್ಥಪನ,ಅಷ್ಟಾವಾಧನ ಸೇವೆ ಹಾಗೂ ಶ್ರೀಪದ್ಮವತಿ ಅಮ್ಮನವರಿಗೂ ಮಂಗಳ ಸ್ನಪನದೊಂದಿಗೆ ಪೂಜಾ ಕೈಂಕರ್ಯಗಳನ್ನು ಅರ್ಪಿಸಿ ರೇಷ್ಮೆ ವಸ್ತ್ರಾಲಂಕಾರಗಳೊಂದಿಗೆ ಮೈಸೂರು ಮಹಾರಾಜರು ಸ್ವಾಮಿಗೆ ಅರ್ಪಿಸಿರುವ ಬೆಳ್ಳಿಯ ಆಭರಣಗಳು ಹಾಗೂ ಗಜಮಾಲೆಯನ್ನು ಭಗವಂತನಿಗೆ ತೊಡಿಸಿ, ವಿವಿಧ ವಿಶೇಷ ಹೂವುಗಳಿಂದ ಅಲಂಕರಿಸಿ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರ ದರ್ಶನ ಅವಕಾಶ ಕಲ್ಪಿಸಲಾಯಿತು.

ಬಳಿಕ ಬೆಳಗ್ಗೆ ಸ್ವಾಮಿಯ ಪಂಚಲೋಹದ ವಿಶೇಷ ಉತ್ಸವ ಮೂರ್ತಿಗೆ ವೈದಿಕರು ಕಲಾಶರಾಧನೆ, ಹೋಮ, ಮಂಗಳದ್ರವ್ಯಗಳ ಸ್ಥಪನ, ಮಂಟಪೋತ್ಸವ, ಯಾತ್ರಾದಾನ ಬಳಿಕ ಶ್ರೀಪದ್ಮಾವತಿ ಸಮೇತವಿರುವ ಶ್ರೀವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಸರ್ವಾಲಂಕೃತಗೊಂಡಿದ್ದ ಬೃಹತ್ ಕಾಷ್ಟ ರಥದಲ್ಲಿ ರಥಾರೋಹಣ ಪೂಜೆ ಬಳಿಕ ಪ್ರತಿಷ್ಠಾಪಿಸಿದ್ದು, ಮಧ್ಯಾಹ್ನ 2.10ಕ್ಕೆ ಸಲ್ಲುವ ಶುಭಲಗ್ನದಲ್ಲಿ ದೇವಾಲಯದ ಇಒ ಉಮಾ ಹಾಗೂ ಗ್ರೇಡ್-2 ತಹಸೀಲ್ದಾರ್ ಚೈತ್ರಾ ಬ್ರಹ್ಮರಥೋತ್ಸವ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಶ್ರೀನಿವಾಸ ಅಗ್ರಹಾರ, ಕೆ.ಶೆಟ್ಟಹಳ್ಳಿ,ಚಿನ್ಙಾಯಕನಹಳ್ಳಿಗೌರಿಪುರ, ಗರುಡನ ಉಕ್ಕಡ,ಮರಳಗಾಲ ದೊಡ್ಡಪಾಳ್ಯ ಸೇರಿದಂತೆ ಶ್ರೀರಂಗಪಟ್ಟಣ ಮತ್ತು ತಾಲೂಕು, ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಬೆಟ್ಟದ ಮೇಲೆ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ಭಗವಂತನ ಬ್ರಹ್ಮರಥವನ್ನು ಗರುಡನ ಪ್ರದಕ್ಷಿಣೆಯಾಗುತ್ತಿದ್ದಂತೆ ಭಕ್ತಿ ಭಾವದಿಂದ ದೇವಾಲಯದ ಸುತ್ತಲು ಉತ್ಸಾಹದಿಂದ ಎಳೆದು ಭಕ್ತಿಯಲ್ಲಿ ಮಿಂದೆದಿದ್ದು, ಭಕ್ತರಿಂದ ಜಯಘೋಷಗಳು ಮೊಳಗಿದವು.

ನವ ವಿವಾಹಿತ ದಂಪತಿಗಳು, ವಿವಾಹ ನಿಶ್ಚಯಗೊಂಡ ನವಜೋಡಿಗಳು, ವಿವಿಧ ಗ್ರಾಮಗಳ ಜನರು ತಮ್ಮ ಕುಟುಂಬ ಸಮೇತ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿ ಕರ್ಪೂರ ಜ್ಯೋತಿ ಬೆಳೆಗಿ, ಈಡುಗಾಯಿ ಹಾಕಿ ರಥಕ್ಕೆ ಹಣ್ಣು-ಧವನ ಎಸೆದು ಭಕ್ತಿಯ ಸಂಪನ್ನತೆ ಪಡೆಯುತ್ತಿದ್ದ ದೃಶ್ಯ ನಿರಂತರವಾಗಿ ಕಂಡುಬಂದಿತು.

ಬೇಸಿಗೆ ತಾಪದ ನಡುವೆ ಬೆಟ್ಟ ಹತ್ತಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಜನರಿಗೆ ಶ್ರೀನಿವಾಸನ ಭಕ್ತರು ಸಾಕಷ್ಟು ಕಡೆ ಅಲ್ಲಲ್ಲಿ ಕಲ್ಲಂಗಡಿ, ಪಾನಕ, ಮಜ್ಜಿಗೆ, ಕೋಸಂಬರಿ, ಪುಳಿಯೋಗರೆ ಮತ್ತು ಮೊಸರನ್ನವನ್ನು ಪ್ರಸಾದವಾಗಿ ವಿನಿಯೋಗಿಸಿ ಸಂತೈಸಿದರು.

ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನೀರಿಕ್ಷೆಯಿಂದ ದೇವಾಲಯದ ಇಒ, ತಾಲೂಕು ಆಡಳಿತ ಮುಂಜಾಗ್ರತೆಯಾಗಿ ಸಾಕಷ್ಟು ಅಗತ್ಯ ಮೂಲ ಸೌಲಭ್ಯ ಹಾಗು ವೈದ್ಯಕೀಯ ಸೇವೆ ಕಲ್ಪಿಸಿದ್ದು, ಶ್ರೀರಂಗಪಟ್ಟಣ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಭದ್ರತೆ ಒದಗಿಸಿ ಯಾವುದೇ ಅವಘಡಗಳು ಹಾಗೂ ವಾಹನಗಳಿಂದ ಟ್ರಾಫಿಕ್ ದಟ್ಟಣೆ ಎದುರಾಗದಂತೆ ಕಾರ್ಯನಿರ್ವಸಿದರು.