ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯ ಕರಾವಳಿಯ ಗ್ರಾಮೀಣ ಭಾಗದಲ್ಲಿ ಬಳಕೆಯಲ್ಲಿರುವ ಕುಚ್ಚಲಕ್ಕಿಯನ್ನು ಪಡಿತರಲ್ಲಿ ಪಡೆಯುವ ದಿನ ಹತ್ತಿರ ಬಂದಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ 5 ತಾಲೂಕುಗಳ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರದಾರರಿಗೆ ಪ್ರತಿ ತಿಂಗಳು ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರಾವಳಿಗರ ಮನವಿಗೆ ಸಿಎಂ ಒಪ್ಪಿದ್ದಾರೆ. ರಾಜ್ಯ ಕರಾವಳಿಯ 6.21 ಲಕ್ಷ ಪಡಿತರದಾರರಿಗೆ ಇದರ ಸೌಲಭ್ಯ ದೊರೆಯಲಿದ್ದು, ಅದಕ್ಕೆ ಬೇಕಾಗುವ 299.33 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಒಟ್ಟಾರೆ ಪಡಿತರದ ಶೇ. 50 ರಷ್ಟು ಕುಚ್ಚಲಕ್ಕಿಯನ್ನು ನೀಡಲು ನಿರ್ಧರಿಸಲಾಗಿದೆ. ಆಹಾರ ನಿಗಮದಿಂದ ಎತ್ತುವಳಿ ಮಾಡುವ ಅಕ್ಕಿ ಸಾಕಷ್ಟು ರುಚಿ ಇರುವುದಿಲ್ಲ. ಇದರಿಂದ ಕೇರಳ ಮಾದರಿಯಲ್ಲಿ ಸ್ಥಳೀಯವಾಗಿ ರೈತರಿಂದ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಭತ್ತ ಖರೀದಿಸಿ, ಅದನ್ನು ಕುಚ್ಚಲಕ್ಕಿಯಾಗಿ ಪರಿವರ್ತಿಸಿ ವಿತರಿಸಲು ಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
2 ಕಿಲೋಗೆ ಬೇಡಿಕೆ:
ಕರಾವಳಿಯಲ್ಲಿ ಕುಚ್ಚಲಕ್ಕಿ ಬಳಕೆ ಹೆಚ್ಚಿದ್ದರೂ ಎಲ್ಲ ಕುಟುಂಬಗಳು ಇದನ್ನೇ ಬಳಸುತ್ತವೆ ಎಂಬಂತಿಲ್ಲ. ಇದರಿಂದ ಯಾರ‍್ಯಾರಿಗೆ ಕುಚ್ಚಲಕ್ಕಿ ನೀಡಬೇಕು ಎಂಬುದು ಆಹಾರ ಇಲಾಖೆಗೆ ಸಮಸ್ಯೆಯಾಗಿದೆ. ಹಾಗಾಗಿ ಜಿಲ್ಲೆಯ ಕರಾವಳಿಯ 5 ತಾಲೂಕುಗಳ ತಹಸೀಲ್ದಾರರಿಂದ ಈ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮಾಹಿತಿ ಪಡೆದಿದೆ. ಜಿಲ್ಲೆಯ ಕರಾವಳಿಯ 5 ತಾಲೂಕುಗಳಲ್ಲಿ ಒಟ್ಟು 8697 ಅಂತ್ಯೋದಯ ಹಾಗೂ 1,46,716 ಬಿಪಿಎಲ್ ಪಡಿತರ ಕಾರ್ಡ್ ಗಳಿವೆ. ಒಟ್ಟಾರೆ 5.58,808 ಪಡಿತರದಾರರಿದ್ದಾರೆ. ಸದ್ಯ ಪ್ರತಿ ಪ್ರಾಪ್ತ ವ್ಯಕ್ತಿಗೆ ಮಾಸಿಕ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಅದರಲ್ಲಿ 2 ಕೆಜಿಯಷ್ಟು ಕುಚ್ಚಲಕ್ಕಿ ಹಾಗೂ ಉಳಿದ 3 ಕೆಜಿಯಷ್ಟು ಸಾಮಾನ್ಯ ಅಕ್ಕಿ ನೀಡಬಹುದು ಎಂದು ಜಿಲ್ಲೆಯ 4 ತಾಲೂಕುಗಳ ತಹಸೀಲ್ದಾರರು ಬೇಡಿಕೆ ಸಲ್ಲಿಸಿದ್ದಾರೆ. ಕಾರವಾರಕ್ಕೆ ಕುಚ್ಚಲಕ್ಕಿ ಬೇಡ ಎಂದು ಇಲ್ಲಿನ ತಹಸೀಲ್ದಾರರು ವರದಿ ನೀಡಿದ್ದಾರೆ.
ಸ್ಥಳೀಯವಾಗಿ ಸಿಗುವುದೇ ಕಷ್ಟ:
ಕುಚ್ಚಲಕ್ಕಿ ಮಾಡಲು ಪ್ರಶಸ್ತವಾದ ಎಂಒ-4, ಜಯಾ, 1001 ಮುಂತಾದ ಭತ್ತದ ತಳಿಗಳನ್ನು ಜಿಲ್ಲೆಯ ಕರಾವಳಿಯ ಸುಮಾರು 4500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 1.5 ರಿಂದ 2 ಲಕ್ಷ ಲಕ್ಷ ಕ್ವಿಂಟಾಲ್ ಮಾತ್ರ ಈ ತಳಿಯ ಭತ್ತ ಉತ್ಪಾದನೆಯಾಗುತ್ತದೆ. ಪ್ರತಿ ಕ್ವಿಂಟಾಲ್ ಭತ್ತದಿಂದ ಶೇ. 68 ರಷ್ಟು ಮಾತ್ರ ಅಕ್ಕಿ ಉತ್ಪಾದಿಸಬಹುದಾಗಿದೆ. ಒಟ್ಟಾರೆ ಉತ್ಪಾದನೆಯಾಗುವ ಭತ್ತದಲ್ಲಿ ಶೇ. 40 ಕ್ಕಿ ತ ಹೆಚ್ಚು ಭತ್ತ ಸ್ಥಳೀಯವಾಗಿಯೇ ಬಳಕೆಯಾಗುತ್ತದೆ. ಅಂದರೆ 50 ಸಾವಿರ ಕ್ವಿಂಟಾಲ್ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಆದರೆ, ಪಡಿತರಕ್ಕೆ ವಿತರಿಸಲು ಪ್ರತಿ ತಿಂಗಳಿಗೇ ಜಿಲ್ಲೆಯಲ್ಲಿ ಸುಮಾರು 9372 ಕ್ವಿಂಟಾಲ್ ಕುಚ್ಚಲಕ್ಕಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಅಕ್ಕಿ ಹೊಂದಿಸುವುದೇ ಕಷ್ಟವಾಗಿದೆ.