ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಘಟಕದ ವತಿಯಿಂದ ಜಂಟಿಯಾಗಿ ಸ್ಥಳೀಯ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ಅಗಲಿದ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರ್ ಅವರಿಗೆ ಬುಧವಾರ ನುಡಿ ನಮನ ಸಲ್ಲಿಸುವಾಗ ಹಾಜರಿದ್ದ ಟಿ.ಪಿ.ರಮೇಶ್, ವಿ.ಪಿ.ಶಶಿಧರ್, ಕೆ.ಎಸ್.ಮೂರ್ತಿ, ಪುರುಷೋತ್ತಮ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಇತರರು ಹಾಜರಿದ್ದರು 
ಜಿಲ್ಲೆ

ಕರಾವಳಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಸಾರಾ ಅಬೂಬಕ್ಕರ್

ಕುಶಾಲನಗರ; ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಹಾಗೂ ಕುಶಾಲನಗರ ತಾಲೂಕು ಘಟಕ ವತಿಯಿಂದ ಸ್ಥಳೀಯ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಸಾರಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ನಾಡಿನ ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಸಾರಾ ಅಬೂಬಕ್ಕರ್ ಅವರು 50 ವರ್ಷಗಳು ಸಾಹಿತ್ಯ ಕೃಷಿ ಮಾಡುವ ಮೂಲಕ ಕರಾವಳಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ರಚಿಸಿದ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಹುಟ್ಟೂರಿಗೆ ಕೊಟ್ಟ ವಿಶೇಷ ಬಳುವಳಿ ಎಂದು ಶ್ಲಾಘಿಸಿದರು.

ಪ್ರಗತಿಪರ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ, 1980ರ ದಶಕದಲ್ಲಿ ಮುಸ್ಲಿಂ ಸಮುದಾಯದೊಳಗಿದ್ದ ಕೆಲವು ಕಟ್ಟುಪಾಡು, ತೊಳಲಾಟಗಳು ಹಾಗೂ ಮಾನಸಿಕ ತುಮುಲಗಳ ಕುರಿತು ಸಾರಾ ಅವರ ಸಾಹಿತ್ಯ ಕೃಷಿ ವಿಭಿನ್ನವಾಗಿದೆ. ತಾವು ಸ್ವತಃ ಅನುಭವಿಸಿದ ಯಾತನೆಗಳಿಗೆ ಅಕ್ಷರ ರೂಪು ಕೊಟ್ಟ ಇವರು ಕನ್ನಡ ಸಾರಸತ್ವ ಹಾಗೂ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯನ್ನು ಹೆಚ್ಚಿಸಿದರು ಎಂದು ಸ್ಮರಿಸಿದರು.

ಸಾಮಾಜಿಕ ಬರಹ ಹಾಗೂ ಇಸ್ಲಾಂನ ಕಟ್ಟುಪಾಡುಗಳ ಬಗ್ಗೆಯೂ ಬರಹದ ಮೂಲಕ ಆಕ್ರೋಶವ್ಯಕ್ತಪಡಿಸಿದ್ದ ದಿಟ್ಟ ಮಹಿಳೆ ಸಾರಾ. ಮಲೆಯಾಳಿ ಭಾಷಿಕರಾದರೂ ತಾವು ಅನುಭವಿಸಿದ ತಲ್ಲಣಗಳನ್ನು ಕನ್ನಡದ ಮೂಲಕ ವ್ಯಕ್ತಪಡಿಸಿ ಸಾಹಿತ್ಯ ಕ್ಷೇತ್ರದ ನಕ್ಷತ್ರವಾಗಿದ್ದಾರೆ. ಶೌರ್ಯ ಹಾಗು ಕ್ರೌರ್ಯಗಳ ನಡುವಿನ ವ್ಯತ್ಯಾಸಗಳನ್ನು ಬರಹಗಳಲ್ಲಿ ದಾಖಲು ಮಾಡಿರುವ ಸಾರಾ ಅವರ ಸಾಹಿತ್ಯ ಕೃಷಿ ಇಂದಿನ ಯುವ ಲೇಖಕರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಹತ್ತನೇ ತರಗತಿಗೆ ವ್ಯಾಸಂಗ ಸ್ಥಗಿತಗೊಳಿಸಿದ ಬಳಿಕ ಸಾಹಿತ್ಯ ಕ್ಷೇತ್ರದತ್ತ ತುಡಿತ ಹೊಂದುವ ಮೂಲಕ ಯಶಸ್ವಿ ಸಾಹಿತಿ ಎಂದೆನಿಸಿಕೊಂಡರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಮಹಿಳಾ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕಸಾಪ ತಾಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕ ಎಂ.ಎನ್.ಕಾಳಪ್ಪ, ಕನ್ನಡ ಭಾರತಿ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲ ಎಸ್.ಟಿ.ಪುರುಷೋತ್ತಮ, ಪದವಿ ವಿಭಾಗದ ಪ್ರಾಂಶುಪಾಲ ರುದ್ರಾಚಾರಿ ಇದ್ದರು.