ಜಿಲ್ಲೆ

ಕರಾಮುವಿ ಕುಲಸಚಿವರಾಗಿ ಪ್ರೊ.ನವೀನ್‌ಕುಮಾರ್ ಅಧಿಕಾರ ಸ್ವೀಕಾರ: ಪ್ರೊ.ಕೆ.ಬಿ.ಪ್ರವೀಣ್ ವರ್ಗಾವಣೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಸಚಿವರಾಗಿ ಪ್ರೊ.ಎಸ್.ಕೆ.ನವೀನ್‌ಕುಮಾರ್ ಗುರುವಾರ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ ಪ್ರೊ.ಕೆ.ಬಿ.ಪ್ರವೀಣ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಈ ಸ್ಥಾನಕ್ಕೆ ಪ್ರೊ.ಎಸ್.ಕೆ.ನವೀನ್‌ಕುಮಾರ್ ನಿಯೋಜಿಸಿ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್ ಚಂದ ಗೆಹಲೋತ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ನವೀನ್‌ಕುಮಾರ್ ಅವರು ಗುರುವಾರ ಮುಕ್ತಗಂಗೋತ್ರಿಯಲ್ಲಿರುವ ಕರಾಮುವಿ ಕಚೇರಿಗೆ ಭೇಟಿ ನೀಡಿ ವಿವಿ ಹಿರಿಯ ಅಧಿಕಾರಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ನಿರ್ಗಮಿತ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ ಸೇರಿದಂತೆ ಇನ್ನಿತರರು ಇದ್ದರು.

ಪ್ರೊ.ಪ್ರವೀಣ್ ಮಾತೃ ಸಂಸ್ಥೆಗೆ ವಾಪಸ್

ಇತ್ತೀಚೆಗೆ ಕುಲಸಚಿವ ಪ್ರೊ.ಪ್ರವೀಣ್ ವಿರುದ್ಧ ಕರಾಮುವಿ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಿತ್ತು. ಕುಲಸಚಿವರ ಕಚೇರಿ ದ್ವಾರಕ್ಕೆ ನೋಟಿನ ಹಾರ ಹಾಕಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ, ಸದನದಲ್ಲಿ ಸಹ ಈ ವಿಷಯ ಪ್ರತಿಧ್ವನಿಸಿತ್ತು.

ಘಟನೆ ಸಂಬಂಧ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ ಮಾಡಿ, ಮುಕ್ತ ವಿವಿ ಸಿಬ್ಬಂದಿ ಆರೋಪದ ಸತ್ಯಾಸತ್ಯತೆ ತಿಳಿದು ವರದಿ ನೀಡಲು ರಾಜ್ಯ ಸರ್ಕಾರ ಸೂಚಿಸಿತ್ತು.

ಪ್ರೊ.ನಿರಂಜನ್, ವಿವಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೊ.ಕೆ.ಬಿ.ಪ್ರವೀಣ್ ವರ್ಗಾವಣೆಯಾಗಿದ್ದು, ಅವರ ಮಾತೃ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗಕ್ಕೆ ವಾಪಸ್ ಕಳುಹಿಸಲಾಗಿದೆ.