ಇಂಡಿ: ರಾಜ್ಯದಲ್ಲಾಗುವ ಪ್ರತಿಯೊಂದು ಅನ್ಯಾಯದ ಕಾರ್ಯಗಳನ್ನು ತಡೆಯಲು ಧ್ವನಿ ಎತ್ತುವ ಕಾರ್ಯ ಮೊದಲು ಮಾಡುವುದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಎಂದು ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪದಾಧಿಕಾರಿಗಳ ಸಂಘಟನಾ ಸಭೆಯ ನೇತೃತ್ವ ವಹಿಸಿ ಗುರುವಾರ ಅವರು ಮಾತನಾಡಿದರು.
ಹಲವು ರಾಜಕಾರಣಿಗಳು ಹೋರಾಟ ಹತ್ತಿಕ್ಕುವ ಕೆಲಸಗಳನ್ನೂ ಮಾಡುತ್ತಾರೆ. ಕರವೇ ಕಾರ್ಯಕರ್ತರ ಬಂಧನವೂ ಆಗುತ್ತದೆ. ಆದರೂ ಹೋರಾಟ ನಿಲ್ಲಲ್ಲ. ನಾರಾಯಣಗೌಡರು ಹಾಗೂ ಪ್ರವೀಣಶೆಟ್ಟಿ ಅವರ ಸಂಘಟನೆಗಳು ಎರಡಿರಬಹುದು. ಆದರೆ ಇಬ್ಬರ ಆಶಯ ಒಂದೇ ಆಗಿದೆ. ಆ ದಿಸೆಯಲ್ಲಿ ಮೊದಲು ನಾವೆಲ್ಲ ಸಂಘಟಿತರಾಗಬೇಕಾಗಿದೆ. ಅಕ್ರಮ ಮರಳು ಗಣಿಗಾರಿಕೆ, ನಾಡದ್ರೋಹಿ ಹೇಳಿಕೆ ಕೊಡುವವರಿಗೆ, ಕನ್ನಡ ನಾಡನ್ನು ಅತಿಕ್ರಮಣ ಮಾಡುವವರಿಗೆ, ಕನ್ನಡ ಭಾಷೆಗೆ ಮಸಿ ಬಳಿಯುವವರಿಗೆ ನಾವೆಲ್ಲ ಹೊರಾಟದ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಬೇಕಿದೆ ಎಂದರು.
ಇಂಡಿ ಓಂಕಾರಾಶ್ರಮದ ಡಾ.ಸ್ವರೂಪಾನಂದ ಶ್ರೀಗಳು ಆಶೀರ್ವಚನ ನೀಡಿ, ನಾಡು-ನುಡಿಗಾಗಿ ಕರವೇ ಕಾರ್ಯಕರ್ತರು ಹೋರಾಟ ನಡೆಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಕನ್ನಡಪರ ಹೋರಾಟ ಮಾಡುವವರನ್ನು ಬಂಧಿಸುವುದು ಸರಿಯಲ್ಲ, ಅವರನ್ನು ಸರ್ಕಾರ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದರು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ಬಸವರಾಜ ಮಾರನಭಾವಿ, ಶಿವಾನಂದ ಮಲಕಗೊಂಡ, ಅಶೋಕ ಭೂಸನೂರ, ಸದ್ದಾಂ ಆಗೂರ, ಶಿವು ಬಗಲಿ, ಆನಂದ ಪವಾರ, ದಯಾನಂದ ಉಮರಾಣಿ, ಮಾದೇವ ರಾಮಗೊಂಡ, ಮಂಜು ತೇಲಿ, ಯಾಜ ಬಾಗವಾನ, ಮಹೇಶ ಹಾರಿವಾಳ, ಆನಂದ ಓಜಿ, ಗಂಗಾಧರ ಗುಳೇದ, ಶ್ರೀಕಾಂತ ರಾಠೋಡ, ಶಂಕರ ಕಾಂಬಳೆ ಮತ್ತಿತರರಿದ್ದರು.