ಬೇಲೂರು: ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ)ಬಣವು ಒಂದು ಜಾತಿ ಹಾಗೂ ಪಕ್ಷಕ್ಕೆ ಸೀಮಿತವಾದ ಸಂಘಟನೆಯಲ್ಲ. ನಮ್ಮದು ಜಾತ್ಯತೀತ, ಪಕ್ಷಾತೀತ ಸಂಘಟನೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಹೇಳಿದರು.
ಪಟ್ಟಣದ ಆರ್‌ವಿ ಕಲ್ಯಾಣ ಮಂಟಪದಲ್ಲಿ ಕರವೇ(ನಾರಾಯಣಗೌಡ)ಬಣದ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯು ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗದೆ ವಿರೋಧ ಪಕ್ಷದ ರೀತಿ ನೊಂದವರ ಹಾಗೂ ಶೋಷಿತರ ಪರ ಕೆಲಸ ಮಾಡುತ್ತಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡಿಗರ ಪರ ಧ್ವನಿಯಾಗಿ ನಿಲ್ಲುವುದು ಹಾಗೂ ನಾಡು ನುಡಿ. ಜಲ ಸಂಸ್ಕೃತಿ, ಭಾಷೆಗೆ ಧಕ್ಕೆಯಾದ ಸಂದರ್ಭ ಧ್ವನಿ ಎತ್ತುವ ಮೂಲಕ ಭ್ರಷ್ಟರಿಗೆ, ಅನ್ಯಭಾಷಿಗರಿಗೆ ಸಿಂಹ ಸ್ವಪ್ನವಾಗಿ ಕೆಲಸ ಮಾಡುತ್ತಿದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ತಾಲೂಕುಗಳಲ್ಲಿ ಸಂಘಟನೆ ಗಟ್ಟಿಯಾಗಿದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ, ಹಲ್ಮಿಡಿ ಉತ್ಸವ ನಡೆಸದಿದ್ದರೆ ದೊಡ್ಡ ಹೋರಾಟ ನಡೆಸಲಿದ್ದೇವೆ ಎಂದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ಶ್ರೀನಿವಾಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಲ್ವಿನ್, ತಾಲೂಕು ಗೌರವಾಧ್ಯಕ್ಷರಾದ ಕೋಗಿಲೆ ಮನೆ ಕುಮಾರ್, ಮಾಳೆಗೆರೆ ತಾರಾನಾಥ್, ಯುವ ಘಟಕದ ಅಧ್ಯಕ್ಷ ಮೋಹನ್‌ಗೌಡ, ಪ್ರಧಾನ ಕಾರ್ಯದರ್ಶಿ ಎಂ.ಟಿ.ವರುಣ್, ಉಪಾಧ್ಯಕ್ಷ ಚಂದ್ರು, ನಗರಾಧ್ಯಕ್ಷ ಪ್ರಸನ್ನ, ಆನಂದ್ ಇತರರಿದ್ದರು.