ಬೆಳಗಾವಿ: ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟಿಸಿದ ಸಂದರ್ಭದಲ್ಲಿ ಬಂಧಿಸಿರುವ ಕರವೇ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟಾ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು, ಬಂಧಿತರ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಹೋಟೆಲ್ವೊಂದರಲ್ಲಿ ನಡೆದಿದ್ದ ಸಂಸದೀಯ ರಾಜ ಭಾಷಾ ಸಮಿತಿಯ ಹಿಂದಿ ಹೇರಿಕೆಯ ಸಮಾಲೊಚನಾ ಕಾರ್ಯಾಗಾರವನ್ನು ವಿರೋಧಿಸಿ ಪ್ರತಿಭಟಿಸಿದ್ದ ಕಾರ್ಯಕರ್ತರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದಾರೆ. ಇದು ಖಂಡನಾರ್ಹ. ತಕ್ಷಣ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವಣ್ಣವರ, ಗಣೇಶ ರೋಕಡೆ, ರಾಜು ನಾಶಿಪುಡಿ ಹೊಳೆಪ್ಪಾ ಸುಳದಾಳ, ಅಡಿವೆಪ್ಪ ತಲ್ಲೂರಿ, ಬಸವರಾಜ ಅವರೊಳ್ಳಿ, ಪ್ರಕಾಶ ಲಮಾಣಿ, ಸತೀಶ ಗುಡದವರ, ವಿಠ್ಠಲ ಹಿಂಡಲ್ಕರ, ಲೋಕೇಶ ರಾಥೋಡ್, ರೇಖಾ ಲೋಕರಿ, ಶಾಂತಾ ಹಣಬರ, ತೇಜಸ್ವಿನಿ ಮಾನೆ ಇತರರಿದ್ದರು.