ಜಿಲ್ಲೆ

ಕರವಸೂಲಿಗೂ ತಟ್ಟಿದ ಕರೊನಾ ಬಿಸಿ

ಶಿರಸಿ: ಕರೊನಾ ಎಫೆಕ್ಟ್ ಕೇವಲ ಜನಜೀವನದ ಮೇಲಷ್ಟೇ ಅಲ್ಲದೆ ನಗರಾಡಳಿತದ ಆರ್ಥಿಕ ಶಕ್ತಿಗೂ ಧಕ್ಕೆ ತಂದಿದೆ. ವಿವಿಧ ಮೂಲಗಳ ತೆರಿಗೆ ಸಂಗ್ರಹದಲ್ಲಿ ಅರ್ಧದಷ್ಟು ವಸೂಲಾಗಿದ್ದು, ಇನ್ನುಳಿದ ಕರದ ಮೊತ್ತ ಬಾಕಿಯುಳಿದಿದೆ.

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರದಷ್ಟು ಕರದಾತರಿದ್ದಾರೆ. ಇದರಲ್ಲಿ ಸ್ವಯಂ ಘೊಷಿತ ಆಸ್ತಿ ತೆರಿಗೆಯಡಿ 2.34 ಕೋಟಿ ರೂಪಾಯಿ ಗುರಿ ನಿಗದಿಪಡಿಸಿದ್ದು, 2.16 ಕೋಟಿ ರೂ. ವಸೂಲಾಗಿದೆ. ಉಳಿದಂತೆ 18 ಲಕ್ಷ ರೂ. ಬಾಕಿಯಿದೆ. ಮಾರ್ಚ್ ತಿಂಗಳಲ್ಲಿ ಈ ತೆರಿಗೆ ವಸೂಲಾಗುವ ಸಾಧ್ಯತೆ ಇತ್ತಾದರೂ ಕರೊನಾ ಎಮರ್ಜೆನ್ಸಿಯ ಕಾರಣದಿಂದ ಒತ್ತಾಯದ ವಸೂಲಿ ಪ್ರಕ್ರಿಯೆ ನಿಂತಿದೆ. ಆಸ್ತಿದಾರರು ಕೂಡ ನಗರಸಭೆಗೆ ಬರದೆ ಕರ ಬಾಕಿ ಉಳಿಸಿಕೊಂಡಿದ್ದಾರೆ. ಇದರ ಜತೆ ಈ ಹಿಂದೆ ಬಾಕಿಯಿದ್ದ 30 ಲಕ್ಷ ರೂಪಾಯಿ ಕರ ಹಾಗೂ 2019-20ನೇ ಸಾಲಿನ 1.95 ಕೋಟಿ ರೂ. ಸೇರಿ ಒಟ್ಟೂ 2.25 ಕೋಟಿ ರೂ. ನೀರಿನ ಕರದಲ್ಲಿ 1.50 ಕೋಟಿ ರೂ. ಮಾತ್ರ ವಸೂಲಾಗಿದೆ. ಈ ವಿಚಾರದಲ್ಲಿ ಶೇ.60ರಷ್ಟು ಮಾತ್ರ ಗುರಿ ಸಾಧನೆಯಾಗಿದ್ದು, ಕರೊನಾ ಕಂಟಕ ನೀರಿನ ಕರಕ್ಕೂ ಬರೆ ಎಳೆದಿದೆ.

ಕರೊನಾ ವಿನಾಯಿತಿ: ಈ ಮೊದಲಾದರೆ ನೀರಿನ ಕರ ನೀಡದಿದ್ದರೆ ನಳ ಸಂಪರ್ಕ ಕಡಿತ ಮಾಡಿ ಆ ಮೂಲಕ ಒತ್ತಡ ನಿರ್ವಿುಸಿ ಕರ ವಸೂಲಿ ಮಾಡುತ್ತಿದ್ದ ನಗರಾಡಳಿತಕ್ಕೆ ಕರೊನಾ ವಿನಾಯಿತಿ ಅಡ್ಡಗಾಲಾಗಿದೆ. ಕರ ತುಂಬಿಲ್ಲದ ಕಾರಣಕ್ಕೆ ಮೂಲಭೂತ ಸೌಕರ್ಯ ಕಡಿತ ಮಾಡಬಾರದರೆಂಬ ಸರ್ಕಾರದ ನಿರ್ದೇಶನಕ್ಕೆ ಕಟ್ಟುಬಿದ್ದ ನಗರಸಭೆ ಸಂಪರ್ಕ ಕಡಿತ ಮಾಡುವಂತೆ ಇಲ್ಲ. ಹೀಗಾಗಿ ಆರ್ಥಿಕ ಹೊಡೆತ ಬೀಳುತ್ತಿದ್ದರೂ ಕೈಕಟ್ಟಿ ಕೂರುವ ಸಂದರ್ಭ ಎದುರಾಗಿದೆ.

ಶೇಕಡಾ 5ರಷ್ಟೂ ಆಗಿಲ್ಲ: ಪ್ರತೀ ವರ್ಷ ಆಸ್ತಿ ತೆರಿಗೆ ವಸೂಲಿ ಸಂಬಂಧ ಏಪ್ರಿಲ್ ತಿಂಗಳಲ್ಲಿ ಕರದಾತರು ಕರ ನೀಡಿದರೆ ಶೇಕಡಾ 5ರಷ್ಟು ವಿನಾಯಿತಿ ನೀಡಲಾಗುತ್ತಿತ್ತು. ಕಳೆದ ವರ್ಷ ಆರ್ಥಿಕ ವರ್ಷದ ಆರಂಭದಲ್ಲಿ ಶೇ.35ರಷ್ಟು ಅಂದರೆ 5 ಸಾವಿರಕ್ಕೂ ಅಧಿಕ ಆಸ್ತಿದಾರರು 75 ಲಕ್ಷ ರೂಪಾಯಿ ಕರ ತುಂಬಿ ಶೇ.5ರ ವಿನಾಯಿತಿ ಸೌಲಭ್ಯ ಪಡೆದಿದ್ದರು. ಆದರೆ ಕರೊನಾ ಭೀತಿಯ ಕಾರಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.5ರಷ್ಟೂ ಕರ ಆಕರಣೆ ಆಗಿಲ್ಲ.

ವಿವಿಧ ಮೂಲಗಳಿಂದ ಬರಬೇಕಿದ್ದ ಕರಕ್ಕೆ ದಂಡದೊಂದಿಗೆ ವಸೂಲಿ ಮಾಡಲಾಗುತ್ತಿತ್ತು. ಮಾರ್ಚ್ ತಿಂಗಳಲ್ಲಿ ನಗರಸಭೆಗೆ ಶೇ.20ರಷ್ಟು ಕರ ವಸೂಲಿ ಆಗುತ್ತಿತ್ತು. ಆದರೆ ಈ ಬಾರಿ ಲಾಕ್​ಡೌನ್ ಹಾಗೂ ಕರೊನಾ ಕಾರಣದಿಂದ ಕರ ವಸೂಲಿಯಾಗಿಲ್ಲ. ಆಗಾಗ ಕೆಲವು ಕರದಾತರು ಕರ ತುಂಬಿದರೂ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಆಸ್ತಿ ತೆರಿಗೆ ಹಾಗೂ ನೀರಿನ ಕರ ಸೇರಿ ಶೇ.50ರಷ್ಟು ಕರ ವಸೂಲಿ ಬಾಕಿಯುಳಿದಿದೆ. ಆದರೆ ಬಾಕಿ ಉಳಿಸಿಕೊಂಡ ಮೊತ್ತವನ್ನು ದಂಡದ ಜತೆ ವಸೂಲಿ ಮಾಡಲಾಗುವುದು. | ರಮೇಶ ನಾಯಕ ಪೌರಾಯುಕ್ತ